| ಕೆ.ಎನ್.ರಾವೇಂದ್ರ ಮಂಡ್ಯ
ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈಗ ಬೆಲ್ಲದ ಗೌರಿ ಮತ್ತು ಗಣಪತಿ ಮೂರ್ತಿಗಳದ್ದೇ ಸದ್ದು. ಸಾಮಾನ್ಯವಾಗಿ ಪಿಒಪಿ, ಜೇಡಿಮಣ್ಣಿನಿಂದ ಮಾಡಿರುವ, ಪರಿಸರ ಸ್ನೇಹಿ ಮೂರ್ತಿಗಳನ್ನು ನೋಡಿರುತ್ತೇವೆ. ಆದರೆ ಇದೇ ಮೊದಲ ಬಾರಿಗೆ ಬೆಲ್ಲದ ಪಾಕದಿಂದಲೇ ಗೌರಿ ಮತ್ತು ಗಣೇಶ ಮೂರ್ತಿಯನ್ನು ತಯಾರಿ ಮಾರಾಟ ಮಾಡಲಾಗುತ್ತಿದೆ. ಅಂತೆಯೇ ಪರಿಸರ ಸ್ನೇಹಿಯೂ ಆಗಿರುವ ವಿಶೇಷ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ವಿಕಸನ ಸಂಸ್ಥೆ ಕೊಡುಗೆ: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ರೈತ ಉತ್ಪಾದಕ ಕಂಪನಿಗಳನ್ನು ತೆರೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಾಗೂ ಅಗತ್ಯ ತರಬೇತಿ ಕೊಡುವ ಗುರಿ ಹೊಂದಿರುವ ವಿಕಸನ ಸಂಸ್ಥೆ, ಇದೀಗ ಬೆಲ್ಲದ ಗೌರಿ- ಗಣಪತಿ ಮೂರ್ತಿಯನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಯಡಿ "ಒಂದು ಜಿಲ್ಲೆ- ಒಂದು ಉತ್ಪನ್ನ''ಕ್ಕೆ ಮಂಡ್ಯ ಜಿಲ್ಲೆಗೆ ಸಾವಯವ ಬೆಲ್ಲ ಆಯ್ಕೆಯಾಗಿದೆ. ಆದ್ದರಿಂದ ಸಾವಯವ ಬೆಲ್ಲ ತಯಾರಿಸಲು ಗುಣಮಟ್ಟದ ಬೆಲ್ಲದ ಉತ್ಪಾದನೆ, ಮೌಲ್ಯವರ್ಧನೆ, ವಿಶೇಷ ಪ್ಯಾಕಿಂಗ್ಗೆ ಆದ್ಯತೆ ಕೊಡುತ್ತಿವೆ. ಈ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಕಸನ ಸಂಸ್ಥೆಯು ಬೆಲ್ಲದ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ಸಿಗುತ್ತಿದೆ.
ಈ ಪ್ರಯೋಗದ ಹಿಂದೆ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ಸಲಹೆ ಇದೆ. ಕಳೆದ ವಾರ ಮಂಡ್ಯಕ್ಕೆ ಬಂದಿದ್ದಾಗ ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ಚಂದ್ರಗುರು ಅವರೊಂದಿಗೆ ಈ ಬಾರಿಯ ಗಣೇಶನ ಹಬ್ಬಕ್ಕೆ ಏನಾದರೂ ವಿಶೇಷತೆ ಮಾಡಿ ಎಂದು ಸಲಹೆ ನೀಡಿದ್ದರು. ಆಗ ಬೆಲ್ಲದಿಂದ ಗಣೇಶನ ಮೂರ್ತಿ ತಯಾರಿದರೆ ಹೇಗೆಂದು ಪ್ರಸ್ತಾಪಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆಗ ಮಹೇಶ್ಚಂದ್ರಗುರು ಅವರು ಸಮಾನ ಮನಸ್ಕರು ಹಾಗೂ ಗಾಣದ ಮಾಲೀಕರೊಂದಿಗೆ ಈ ವಿಚಾರ ಚರ್ಚಿಸಿದ್ದರು. ಜತೆಗೆ, ಬೆಂಗಳೂರಿನ ಮೋಲ್ಡ್ ತಯಾರಿಕರೊಬ್ಬರನ್ನು ಸಂಪರ್ಕಿಸಿ ಫೈಬರ್ನಿಂದ ವಿವಿಧ ಅಳತೆಗಳ ಗಣೇಶನ ಮೂರ್ತಿಗಳ ಮೋಲ್ಡ್ಗಳನ್ನು ಸಿದ್ಧಪಡಿಸಿದರು. ಅವುಗಳ ಮೂಲಕ ಮಂಡ್ಯ ತಾಲೂಕು ಸಿದ್ದಯ್ಯನಕೊಪ್ಪಲು ಗ್ರಾಮದ ಪಾಪಣ್ಣ ಅವರ ಆಲೆಮನೆಯಲ್ಲಿ ಬೆಲ್ಲದ ಪಾಕದಿಂದ ಗೌರಿ -ಗಣೇಶನ ಮೂರ್ತಿಗಳ ತಯಾರಿಕೆ ಆರಂಭಿಸಿದರು.
ಮೂರ್ನಾಲ್ಕು ದಿನಗಳಲ್ಲಿ ಅರ್ಧ ಅಡಿಯಿಂದ ಮೂರು ಅಡಿ ಎತ್ತರದವರೆಗಿನ 400ಕ್ಕೂ ಹೆಚ್ಚು ಗಣೇಶ ಹಾಗೂ ಗೌರಿ ಮೂರ್ತಿ ತಯಾರಿಸಲಾಯಿತು. ಹದವಾದ ಬೆಲ್ಲದ ಪಾಕವನ್ನು ಅಚ್ಚು ಮಣೆ ಮತ್ತು ಬಕೆಟ್ಗಳಲ್ಲಿ ಹಾಕುವ ಬದಲಿಗೆ ಮೋಲ್ಡ್ಗಳಿಗೆ ಸುರಿದು ಸಿಹಿ ಗೌರಿ-ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ.
ಮೂರ್ತಿಗಳ ಎತ್ತರ ಆಧರಿಸಿ ದರ ನಿಗದಿಪಡಿಸಲಾಗಿದೆ. ಅರ್ಧ ಅಡಿ ಗಣೇಶನ ಮೂರ್ತಿಗೆ 150 ರೂ., 1 ಅಡಿಗೆ 200 ರೂ., ಎರಡು ಅಡಿಗೆ 250 ರೂ ಹಾಗೂ 3 ಅಡಿ ಎತ್ತರದ ಮೂರ್ತಿಗೆ 800 ರೂ. ದರವಿದೆ.
ಸಚಿವ, ಶಾಸಕರಿಂದ ಮೆಚ್ಚುಗೆ: ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆ ಆಯೋಜಿಸಿದ್ದ ವೇಳೆಯೇ ಬೆಲ್ಲದ ಮೂರ್ತಿಗಳನ್ನು ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಶಾಸಕರಾದ ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ ವೀಕ್ಷಿಸಿದರು. ಅಂತೆಯೇ ವಿಕಸನ ಸಂಸ್ಥೆಯ ಹೊಸತನಕ್ಕೆ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಲ್ಲದ ಮೂರ್ತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಚಾಲನೆ ನೀಡಿದರು.
ಹೊಸತನದಿಂದ ಕೂಡಿರಬೇಕೆಂಬ ಉದ್ದೇಶದೊಂದಿಗೆ ಬೆಲ್ಲದಿಂದ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಲಾಯಿತು. ಈಗಾಗಲೇ 300 ಮೂರ್ತಿಗಳು ಮಾರಾಟವಾಗಿದ್ದು, ಇನ್ನಷ್ಟು ಬೇಡಿಕೆಯಿದೆ. ಆದ್ದರಿಂದ ಆ.30ರಂದು ಮಧ್ಯಾಹ್ನದೊಳಗೆ ಇನ್ನು 100 ಮೂರ್ತಿಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಈ ಮೂರ್ತಿಗಳನ್ನು ಮನೆಯಲ್ಲೇ ನೀರು ತುಂಬಿದ ಪಾತ್ರೆಗಳಲ್ಲಿ ವಿಸರ್ಜಿಸಿ ಕರಗಿದ ಬೆಲ್ಲದ ನೀರಿನಿಂದಲೇ ಪ್ರಸಾದ ಸಿದ್ಧಪಡಿಸಿ ಜನರಿಗೆ ಪ್ರಸಾದದ ರೂಪದಲ್ಲಿ ಹಂಚಬಹುದು.
|ಮಹೇಶ್ಚಂದ್ರಗುರು ನಿರ್ದೇಶಕ ವಿಸಕನ ಸಂಸ್ಥೆ