ಒಂದೇ ದಿನ ತಾಯಿ-ಮಗ ಇಬ್ಬರೂ ಹೃದಯಾಘಾತದಿಂದ ಸಾವು! ಮೈಸೂರು ಜಿಲ್ಲೆಯಲ್ಲಿ ಮನಕಲಕುವ ಘಟನೆ

New Project(25)
Published on

ಎಚ್​.ಡಿ.ಕೋಟೆ: ತಾಯಿಗೆ ಪಾರ್ಶ್ವವಾಯು ಆಗಿದೆ ಎಂಬ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಮೃತಪಟ್ಟರೆ, ಅತ್ತ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಕೊನೆಯುಸಿರೆಳೆದ ಮನಕಲಕುವ ಘಟನೆ ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಎಚ್​.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ನಿವಾಸಿ ಗೋಪಾಲಯ್ಯ ಅವರ ಪತ್ನಿ ಸಣ್ಣಮಂಚಮ್ಮ(58), ಇವರ ಪುತ್ರ ಕೃಷ್ಣ (45) ಮೃತರು.

ಎಚ್​.ಡಿ. ಕೋಟೆ ಪಟ್ಟಣದ ಸೇಂಟ್​ ಮೇರಿಸ್​ ಆಸ್ಪತ್ರೆ ಮುಂಭಾಗ ಕೃಷ್ಣ ಅವರು ಟೀ ಅಂಗಡಿ ನಡೆಸುತ್ತಿದ್ದರು. ಜತೆಗೆ ಆಟೋ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ಕೃಷ್ಣ ಅವರ ತಾಯಿ ಸಣ್ಣಮಂಚಮ್ಮ ಭಾನುವಾರ ಪಾರ್ಶ್ವವಾಯುಗೆ ತುತ್ತಾಗಿದ್ದರು. ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ ಈ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ವಿಚಾರ ಕೇಳಿದ ಕೃಷ್ಣ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಕೃಷ್ಣ ಬದುಕಲಿಲ್ಲ. ಮಗ ಮೃತಪಟ್ಟ ವಿಷಯವನ್ನು ತಾಯಿಗೆ ತಿಳಿಸಿದಾಗ ಅವರೂ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.

ಕೃಷ್ಣನಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ತಾಯಿ-ಮಗ ಮೃತಪಟ್ಟ ವಿಚಾರ ತಿಳಿದು ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮದವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಮೃತರ ಅಂತ್ಯಕ್ರಿಯೆ ಸೋಮವಾರ ಪಟ್ಟಣದ ರುದ್ರಭೂಮಿಯಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net