ಬೆಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ನಗರದ ಪಶ್ಚಿಮ ವಿಭಾಗದ ಪೊಲೀಸರು ಶನಿವಾರ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರ ಉಪ್ಪಾರಪೇಟೆಯಲ್ಲಿರುವ ಕಚೇರಿಯಲ್ಲಿ ಲಯನ್ಸ್ ರಕ್ತ ನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆದಿದ್ದು, 75 ಪೊಲೀಸರು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಹಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ರಕ್ತದ ಅವಶ್ಯಕತೆಯಿದ್ದು, ರಕ್ತದಾನ ಮಾಡುವಂತೆ ಆಸ್ಪತ್ರೆಯವರು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಪಶ್ಚಿಮ ವಿಭಾಗದ ಪೊಲೀಸರು, ಕೆಲಸದ ಒತ್ತಡದ ನಡುವೆಯೂ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ವಿಭಾಗದ ಹಲವು ಠಾಣೆಗಳ ಇನ್ಸ್ಪೆಕ್ಟರ್, ಪಿಎಸ್ಐ, ಎಎಸ್ಐ, ಹೆಡ್ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಸೇರಿ ಒಟ್ಟು ನೂರಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರ ಕಾರ್ಯಕ್ಕೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.