‘ವಿಜಯವಾಣಿ’ ಗುರುವಾರ ನಡೆಸಿದ ಫೋನ್ಇನ್ ಕಾರ್ಯಕ್ರಮದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸಂಸ್ಥೆಯ ಹೊಸ ಹೆಜ್ಜೆಗಳ ಬಗ್ಗೆ ವಿವರಿಸಿದರು. ಹಾಲು ಉತ್ಪಾದಕರು, ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಅಮೂಲ್ನ ‘ಟೇಸ್ಟ್ ಆಫ್ ಇಂಡಿಯಾ’ ಮಾದರಿಯಲ್ಲಿ ನಂದಿನಿಯನ್ನು ‘ಟೇಸ್ಟ್ ಆಫ್ ಸೌತ್ ಇಂಡಿಯಾ’ ಮಾಡುವ ದಿಕ್ಕಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸುಳಿವು ನೀಡಿದರು. ರೈತರಿಂದ ಮೆಕ್ಕೆಜೋಳ ಖರೀದಿ, 12 ಲಕ್ಷ ಹಸುಗಳಿಗೆ ವಿಮೆ, 1400 ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ, ರೈತರಿಂದ ಹಾಲು ಖರೀದಿಗೆ ಏಕರೂಪ ದರ ನೀಡುವುದು ಸೇರಿ ವಿವಿಧ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ಕೆಎಂಎಫ್ ಅಧೀನದ 14 ಒಕ್ಕೂಟಗಳ ವ್ಯಾಪ್ತಿಯ ಹಾಲು ಉತ್ಪಾದಕರ 12 ಲಕ್ಷ ಹಸುಗಳನ್ನು ವಿಮಾ ವ್ಯಾಪ್ತಿಗೆ ತರಲಾಗುವುದು. ಹಾಲಿನ ದರ ಏರಿಕೆಯಲ್ಲಿ 40 ಪೈಸೆಯನ್ನು ವಿಮೆಗಾಗಿ ಮೀಸಲಿಡಲಾಗಿದೆ. ಹಾಲು ಕೊಡುವ ಹಸು ಸತ್ತರೆ ರೈತರಿಗೆ 60 ರಿಂದ 70 ಸಾವಿರ ರೂ. ಸಿಗುವಂತೆ ನೋಡಿಕೊಳ್ಳ ಲಾಗುತ್ತಿದೆ. ವಿಮೆಗಾಗಿ ಟೆಂಡರ್ ಕರೆಯಲಾಗಿದೆ. ಒಂದು ತಿಂಗಳಿನಲ್ಲಿ ಜಾರಿಗೆ ಬರಲಿದೆ. ರಾಜ್ಯಾದ್ಯಂತ ಹಾಲು ಉತ್ಪಾದಕರಿಗೆ ಏಕರೂಪದಲ್ಲಿ ದರ ಖಾತ್ರಿ ಮಾಡುವ ಕುರಿತು ಶೀಘ್ರವೇ ತೀರ್ಮಾನ ಪ್ರಕಟವಾಗಲಿದೆ ಎಂದು ತಿಳಿಸಿದರು.
ಮಾರುಕಟ್ಟೆ ವಿಸ್ತರಣೆ ಮಾಡಲು ಪೂರಕವಾಗಿ ಹಾಲು ಉತ್ಪಾದನೆ ಹೆಚ್ಚಿಸಲು ಮುಂದಿನ ಒಂದು ವರ್ಷದಲ್ಲಿ 1400 ಹೊಸ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸುವ ಗುರಿಹಾಕಿಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದಕರನ್ನು ಹೆಚ್ಚಿಸುವ ನಿಟ್ಟಿನಲ್ಲೂ ಕಾರ್ಯೋನ್ಮುಖವಾಗಿರುವ ಬಗ್ಗೆ ಬಾಲಚಂದ್ರ ಜಾರಕಿಹೊಳಿ ವಿವರಣೆ ನೀಡಿದರು. ಸುವಾಸಿತ ಹಾಲಿನ ಪ್ಯಾಕಿಂಗ್ ವಿಧಾನ ಬದಲಿಸಿ, ಸುವಾಸಿತ ಹಾಲು ಮಾರಾಟ ಹೆಚ್ಚಿಸಲು ಉದ್ದೇಶಿಸಲಾಗಿದೆ. ಜತೆಗೆ ಡೇರಿಮಿಲ್ಕ್, ಕ್ಯಾಡ್ಬರಿ ಚಾಕೊಲೇಟ್ ಮಾದರಿಯಲ್ಲಿ ಪ್ರೀಮಿಯಂ ಚಾಕಲೇಟ್ ಮಾರುಕಟ್ಟೆಗೆ ಪರಿಚಯಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ: ಪಶು ಆಹಾರ ಘಟಕಗಳಿಗೆ ಬೇಕಾಗುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಕ್ವಿಂಟಾಲ್ಗೆ 1,760 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಕೆಎಂಎಫ್ ನಿರ್ಧರಿದೆ. ಮೇ 9ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ಒಟ್ಟು 22,000 ಮೆಟ್ರಿಕ್ ಟನ್ ಖರೀದಿಸಲು ಉದ್ದೇಶಿಸಲಾಗಿದೆ.