ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ಬಿಡುಗಡೆಯಾಗಿ ಏಪ್ರಿಲ್ 14ಕ್ಕೆ ಬರೋಬ್ಬರಿ ಒಂದು ವರ್ಷ. ಈ ಒಂದು ವರ್ಷದಲ್ಲಿ ಯಶ್ ಅಭಿನಯದ ಯಾವೊಂದು ಹೊಸ ಚಿತ್ರವೂ ಘೋಷಣೆಯಾಗಿಲ್ಲ. ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಯಶ್ ಅಭಿಮಾನಿಗಳಿಗೆ ಇದ್ದೇ ಇದೆ. ಆದರೆ, ಆ ಪ್ರಶ್ನೆಗೆ ಇದುವರೆಗೂ ಪೂರ್ಣಪ್ರಮಾಣದಲ್ಲಿ ಉತ್ತರ ಸಿಕ್ಕಿಲ್ಲ.
ಎರಡು ತಿಂಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ, ಎಲ್ಲವೂ ಅಂತಿಮವಾದ ಮೇಲೆ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ಯಶ್ ಹೇಳಿದ್ದರು. ಮೂಲಗಳ ಪ್ರಕಾರ, ಮುಂದಿನ ತಿಂಗಳ ಹೊತ್ತಿಗೆ ಯಶ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಒಂದು ಕ್ಲಾರಿಟಿ ಸಿಗಬಹುದಂತೆ.
ಹೌದು, ಸದ್ಯ ಯಶ್ ತಮ್ಮ ಕುಟುಂಬ ಸಮೇತ ಯೂರೋಪ್ ಪ್ರವಾಸದಲ್ಲಿದ್ದಾರೆ. ತಿಂಗಳ ಕೊನೆಯ ಹೊತ್ತಿಗೆ ಅವರು ವಾಪಸ್ಸಾಗಲಿದ್ದು, ಇನ್ನೊಮ್ಮೆ ಎಲ್ಲವನ್ನೂ ಪಕ್ಕಾ ಮಾಡಿಕೊಂಡ ನಂತರ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇನ್ನೂ ಮುಗಿಯದ ಕಬ್ಜ, ಸಾಹಸಪ್ರಿಯರಿಗೆ ಹಬ್ಬ
ಅಂದಹಾಗೆ, ಯಶ್ ಅಭಿನಯದ ಹೊಸ ಚಿತ್ರವು ವಿಭಿನ್ನವಾಗಿರುತ್ತದೆ ಮತ್ತು 'ಕೆಜಿಎಫ್' ಗುಂಗಿನಿಂದ ಹೊರಗಿರುತ್ತದಂತೆ. ಅದು ಆಕ್ಷನ್ ಚಿತ್ರವಾದರೂ, 'ಕೆಜಿಎಫ್' ತರಹ ಇರುವುದಿಲ್ಲ, ಬೇರೆ ಮೂಡ್ನಲ್ಲಿ ಇರುತ್ತದೆ ಎಂದು ಹೇಳಲಾಗುತ್ತಿದೆ.