

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿರುವ ಹೆಸರುಗಳೆಂದರೆ ಅದು ಉರಿಗೌಡ, ನಂಜೇಗೌಡ ಅವರುಗಳದ್ದು. ಈಗ ಅದೇ ಹೆಸರಿನಲ್ಲಿ ಚಿತ್ರ ನಿರ್ಮಿಸುವುದಕ್ಕೆ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಮುಂದಾಗಿದ್ದು, ಮೊದಲ ಹಂತವಾಗಿ 'ಉರೀಗೌಡ-ನಂಜೇಗೌಡ' ಎಂಬ ಹೆಸರನ್ನು ನೋಂದಾಯಿಸಿದ್ದಾರೆ.
ಈ ಸಂಬಂಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವನ್ನು ನೀಡಿದ್ದು, ಗುರುವಾರ ಶೀರ್ಷಿಕೆ ನೋಂದಾಯಿಸಲಾಗಿದೆ. 'ಉರಿಗೌಡ-ನಂಜೇಗೌಡ' ಅಥವಾ 'ನಂಜೇಗೌಡ-ಉರೀಗೌಡ' ಎಂಬ ಹೆಸರುಗಳನ್ನು ತಮಗೆ ನೀಡಬೇಕೆಂದು ಅವರು ಮನವಿ ಸಲ್ಲಿಸಿದ್ದಾರೆ. ಈ ಹೆಸರುಗಳು ಮುನಿರತ್ನ ಅವರ ವೃಷಭಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ನಡಿ ನೋಂದಾಯಿತವಾಗಿದೆ.
ಉರಿಗೌಡ ಮತ್ತು ನಂಜೇಗೌಡ ಎಂಬ ಹೆಸರುಗಳು ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಈ ಹೆಸರುಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು. ಟಿಪ್ಪು ಸುಲ್ತಾನ್ಗೆ ಉರಿಗೌಡ ಮತ್ತು ನಂಜೇಗೌಡ ಅವರು ಬುದ್ದಿ ಕಲಿಸಿದ ರೀತಿಯಲ್ಲೇ ಸಿದ್ದರಾಮಯ್ಯನವರಿಗೆ ಮತದಾರರು ಬುದ್ದಿ ಕಲಿಸಬೇಕು ಎಂದು ಹೇಳಿದ್ದರು.
ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದು ಅದೇ ಉರಿಗೌಡ ಮತ್ತು ನಂಜೇಗೌಡ ಎಂಬ ವಿಷಯವನ್ನು ಭಾರತೀಯ ಜನತಾ ಪಾರ್ಟಿ ಪ್ರತಿಪಾದಿಸುವುದರ ಜತೆಗೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸುವ ದಿನದಂದು ಉರೀಗೌಡ ಮತ್ತು ನಂಜೇಗೌಡ ಹೆಸರಿನ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು.
ಇಷ್ಟೆಲ್ಲಾ ವಿವಾದಗಳನ್ನು ಹುಟ್ಟುಹಾಕಿರುವ ಉರಿಗೌಡ ಮತ್ತು ನಂಜೇಗೌಡರ ಹೆಸರನ್ನು ಇದೀಗ ಮುನಿರತ್ನ ನೋಂದಾಯಿಸಿದ್ದಾರೆ. ಈ ಹೆಸರುಗಳಲ್ಲಿ ಅವರು ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದರೂ, ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ, ಯಾರು ನಿರ್ದೇಶಿಸುತ್ತಾರೆ ಮುಂತಾದ ಯಾವುದೇ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.