ಬೆಂಗಳೂರು: ನಿರೂಪಕಿ, ನಟಿ ಈಗ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಆ ಖುಷಿಗೆ ಕಾರಣ ವಿಂಡೋಸೀಟ್! ಅಂದರೆ, ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ವಿಂಡೋಸೀಟ್ ಚಿತ್ರದ ಫಸ್ಟ್ಲುಕ್ ಮತ್ತು ಕಿರು ವಿಡಿಯೋ ತುಣುಕು ಇಂದು ಬಿಡುಗಡೆ ಆಗಿದೆ.
ಹಿನ್ನೆಲೆ ಸಂಗೀತದ ಮೂಲಕವೇ ಅಚ್ಚರಿಯ ಪ್ರಯಾಣಕ್ಕೆ ನೂಕುವ ವಿಂಡೋಸೀಟ್ನಲ್ಲಿ ಒಂದಷ್ಟು ವಿಶೇಷತೆಗಳ ಹೂರಣವಿದೆ. ಕಾಣದ ಹುಡುಗಿಯ ನೆರಳಿದೆ. ಹಾರಾಡುವ ಕೂದಲಿನ ಸೊಗಸಿದೆ. ಬೆರಗುಗಣ್ಣಲ್ಲೇ ಆಕೆಯನ್ನು ನೋಡಬೇಕೆನ್ನುವ ತುಡಿತ ನಾಯಕನಿಗೂ ಇದೆ. ಹೀಗೆ ಇದೆಲ್ಲವನ್ನು ನೋಡುತ್ತಿದ್ದರೆ ಇದೊಂದು ಪಕ್ಕಾ ಲವ್ಸ್ಟೋರಿ ಸಿನಿಮಾ ಎಂದೆನಿಸದೇ ಇರದು.
ಸದ್ಯಕ್ಕೆ ಫಸ್ಟ್ಲುಕ್ ಮೂಲಕ ಈ ಎಲ್ಲವನ್ನು ಹೇಳಿರುವ ನಿರ್ದೇಶಕಿ ಶೀತಲ್ ಶೆಟ್ಟಿ, ಅಸಲಿ ಕಥೆಯ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇಂಪಾದರೆ, ಆ ಸಂಗೀತಕ್ಕೆ ಒಂದೇ ಸಾಲಿನಲ್ಲಿ ಜೀವ ತುಂಬಿದ್ದಾರೆ ಗಾಯಕ ವಿಜಯ್ ಪ್ರಕಾಶ್. ನಿರೂಪ್ ಭಂಡಾರಿ ಸಹ ಅಷ್ಟೇ ಚೆಂದವಾಗಿ ಕಾಣಿಸಿದ್ದಾರೆ.
ವಿಶೇಷ ಏನೆಂದರೆ, ನಿರ್ಮಾಪಕ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರ, ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಸ್ವತಃ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಶೀತಲ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಫಸ್ಟ್ಲುಕ್ ಹಂಚಿಕೊಂಡಿದ್ದಾರೆ. ನಿರೂಪ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯರಾಗಿದ್ದಾರೆ.