ಸಿನಿವಾಣಿ

ಹಾಲಿವುಡ್​ಗೆ ರಾಜಮೌಳಿ? ಮಾರ್ವಲ್​ ಚಿತ್ರ ನಿರ್ದೇಶಿಸುವ ಸಾಧ್ಯತೆ

ಹೈದರಾಬಾದ್: ಟಾಲಿವುಡ್​ನ ಜನಪ್ರಿಯ ನಿರ್ದೇಶಕ ಎಸ್​.ಎಸ್​. ರಾಜಮೌಳಿ, ಹಾಲಿವುಡ್​ಗೆ ಹೋಗಬಹದು ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇವೆ. ಅದರಲ್ಲೂ 'ಕೆಜಿಎಫ್​ 2' ಮತ್ತು 'ಆರ್​.ಆರ್​.ಆರ್​' ನಂತರ ದೊಡ್ಡ ಬಜೆಟ್​ನ ಮತ್ತು ಇಡೀ ವಿಶ್ವವೇ ತಿರುಗಿ ನೋಡುವಂತಹ ಚಿತ್ರಗಳನ್ನು ಕೊಟ್ಟ ನಂತರ, ಅವರು ಸಹಜವಾಗಿಯೇ ಹಾಲಿವುಡ್​ಗೆ ಹಾರುತ್ತಾರೆ ಎಂಬ ಮಾತಿತ್ತು.

ಈಗ ಮಾರ್ವೆಲ್​ ಸಂಸ್ಥೆಯ ಬಾಸ್​ ಕೆವಿನ್​ ಫೀಜ್​, ರಾಜಮೌಳಿಗೆ ಒಂದು ಆಪರ್​ ಕೊಟ್ಟಿದ್ದು, ಮಾರ್ವಲ್​ ಕಾಮಿಕ್ಸ್​ ಆಧಾರಿತ ಚಿತ್ರವೊಂದನ್ನು ನಿರ್ದೇಶಿಸಿ ಕೊಡುವಂತೆ ಹೇಳಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, 'ಹಾಲಿವುಡ್​ನಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಫರ್​ಗಳು ಬರುತ್ತಿವೆ. ಆದರೆ, ಸದ್ಯಕ್ಕೆ ನನಗೆ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕಾರಣ, ನಾನು ಮಹೇಶ್​ ಬಾಬು ಅವರಿಗೊಂದು ಚಿತ್ರ ಮಾಡಿ ಕೊಡಬೇಕಾಗಿದೆ. ಹಾಗಾಗಿ, ಆ ಚಿತ್ರದ ಮೇಲೆ ನಾನು ಗಮನ ಹರಿಸಿದ್ದೇನೆ. ಅದನ್ನು ಮುಗಿಸುವುದಕ್ಕೆ ಸ್ವಲ್ಪ ಸಮಯ ಬೇಕು. ಅದು ಮುಗಿದ ನಂತರ ಏನು ಎಂದು ಈಗಲೇ ಯೋಚಿಸಿಲ್ಲ. ಈ ಚಿತ್ರ ಮೊದಲು ಮುಗಿಯಲಿ' ಎಂದು ಹೇಳಿದ್ದಾರೆ.

ಹಾಲಿವುಡ್​ನಿಂದ ಕಲಿಯುವುದು ಸಾಕಷ್ಟು ಇದೆ ಎಂದು ಹೇಳಿರುವ ರಾಜಮೌಳಿ, 'ಹಾಲಿವುಡ್​ನಿಂದ ಕಲಿಯುವುದು ಬಹಳ ಕಲಿಯುವುದಿದೆ. ಅವರ ಕೆಲಸ ಮಾಡುವ ಶೈಲಿ, ಅವರ ಮೆಥಡಾಲಜಿ ಎಲ್ಲವನ್ನು ಮೊದಲು ಅರಿತುಕೊಳ್ಳಬೇಕು. ಹಾಲಿವುಡ್​ನಲ್ಲಿ ನೇರವಾಗಿ ಕೆಲಸ ಮಾಡುವುದಕ್ಕಿಂತ ಅವರ ಜತೆಗೆ ಸೇರಿ ಕೆಲಸ ಮಾಡುವುದಕ್ಕೆ ಸಾಧ್ಯವಾ? ಎಂದು ಯೋಚಿಸುತ್ತಿದ್ದೇನೆ' ಎಂದಿದ್ದಾರೆ.

ಸದ್ಯ, 'ಆರ್​.ಆರ್​.ಆರ್​' ಚಿತ್ರವನ್ನು ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಬಿಡುಗಡೆ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ರಾಜಮೌಳಿ, ಮುಂದಿನ ವರ್ಷ ಮಹೇಶ್​ ಬಾಬು ಅಭಿನಯದ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆ ಇದೆ.