ಸಿನಿವಾಣಿ

ಒಂದೇ ದಿನ ಬಿಡುಗಡೆಯಾಗಲಿದೆಯಾ ಅಕ್ಷಯ್​ ಅಭಿನಯದ ಎರಡು ಸಿನಿಮಾಗಳು?

chetannadiger

ಮುಂಬೈ: ಯಾವಾಗ ಶುರುವಾಯಿತೋ, ಎಲ್ಲಿಂದ ಶುರುವಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಡಿ, ಕೊನೆಗೆ ಅಕ್ಷಯ್​ ಇದಕ್ಕೆ ಉತ್ತರ ಕೊಡುವಂತಾಗಿದೆ.

ಅಕ್ಷಯ್​ ಕುಮಾರ್​ ಅಭಿನಯದ 'ಸೂರ್ಯವಂಶಿ' ಮತ್ತು 'ಬೆಲ್ ​ಬಾಟಂ' ಚಿತ್ರಗಳು ಬಿಡುಗಡೆಗೆ ಸಿದ್ಧವಿದೆ. ಈ ಪೈಕಿ, 'ಸೂರ್ಯವಂಶಿ' ಚಿತ್ರವು ಕಳೆದ ವರ್ಷ ಮಾರ್ಚ್​​ನಲ್ಲಿ ಬಿಡುಗಡೆಯಾಗಬೇಕಿತ್ತು. ಲಾಕ್​ಡೌನ್​ನಿಂದ ವಿಳಂಬವಾಗಿ ಈ ವರ್ಷ ಅಂತಾಯಿತು. ಲಾಕ್​ಡೌನ್​ ಇಲ್ಲದಿದ್ದರೆ ಇಷ್ಟರಲ್ಲಿ ಚಿತ್ರ ಬಿಡುಗಡೆಯಾಗಿರುತ್ತಿತ್ತೋ ಏನೋ?

ಇನ್ನು 'ಬೆಲ್​ ಬಾಟಂ' ಚಿತ್ರವು ಶುರುವಾಗಿದ್ದೇ ಕಳೆದ ಆಗಸ್ಟ್​ನಲ್ಲಿ. ಸ್ಕಾಟ್​ಲ್ಯಾಂಡ್​ನಲ್ಲಿ ಒಂದೇ ಹಂತದ 50 ದಿನಗಳ ಚಿತ್ರೀಕರಣ ಮುಗಿಸಿದ ಈ ಚಿತ್ರತಂಡ, ಈ ವರ್ಷ ಏಪ್ರಿಲ್​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಲಾಕ್​ಡೌನ್​ನಿಂದ ಆ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಯಿತು. ಇದೀಗ ಆ ಎರಡೂ ಚಿತ್ರಗಳು ಆಗಸ್ಟ್​ 15ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಸುದ್ದಿಯನ್ನು ಅಕ್ಷಯ್​ ನಿರಾಕರಿಸಿದ್ದಾರೆ. ಎರಡೂ ಚಿತ್ರಗಳ ಬಿಡುಗಡೆಯ ದಿನಾಂಕ ಇನ್ನಷ್ಟೇ ಫಿಕ್ಸ್​ ಆಗಬೇಕಿದ್ದು, ಪರಿಸ್ಥಿತಿ ನೋಡಿಕೊಂಡು ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ.