

ಮುಂಬೈ: ಎಲ್ಲ ಹೀರೋಗಳಿಗೂ ತಾನು ದೊಡ್ಡ ಸ್ಟಾರ್ ಆಗಬೇಕು, ಸೂಪರ್ಸ್ಟಾರ್ ಆಗಿ ಮಿಂಚಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ನಟ ಸೈಫ್ ಅಲಿ ಖಾನ್ಗೆ ಮಾತ್ರ ಬೇರೆ ಖಾನ್ಗಳ ತರಹ ಸೂಪರ್ಸ್ಟಾರ್ ಆಗದಿದ್ದೇ ಒಳ್ಳೆಯದಾಯ್ತು ಅಂತ ಅನಿಸಿದೆ. ಇದ್ಯಾಕಪ್ಪಾ ಹೀಗೆ? ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಮುಂದಿಟ್ಟಾಗ, ಅದಕ್ಕೆ ಅವರು ವಿವರಣೆ ನೀಡಿದ್ದಾರೆ.
'ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸೂಪರ್ಸ್ಟಾರ್ಡಂಗಾಗಿ ಪೈಪೋಟಿ ನಡೆಯುತ್ತಿತ್ತು. ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಶಾರೂಖ್ ಖಾನ್ ನಡುವೆ ಯಾರು ಸೂಪರ್ಸ್ಟಾರ್ ಎಂಬ ಸ್ಪರ್ಧೆ ಸತತವಾಗಿ ನಡೆಯುತ್ತಲೇ ಇತ್ತು. ನಾನು ಆ ಪೈಪೋಟಿಗೆ ಹೋಗಲಿಲ್ಲ. ಬಹುಶಃ ಸೂಪರ್ಸ್ಟಾರ್ ಆಗಿಬಿಟ್ಟಿದ್ದರೆ, ಪ್ರಯೋಗ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಒಬ್ಬ ನಟನಾಗಿ ನನ್ನದೇ ಇನ್ನೊಂದು ದಾರಿಯಲ್ಲಿ ನಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ' ಎಂದು ಸೈಫ್ ಅಲಿ ಖಾನ್ ಹೇಳಿಕೊಂಡಿದ್ದಾರೆ.
ತಮ್ಮ ಯಶಸ್ಸಿಗೆ ಅಕ್ಷಯ್ ಕುಮಾರ್ಗೆ ಸಹ ಕ್ರೆಡಿಟ್ ನೀಡುವ ಸೈಫ್, ಬಹುಶಃ ಅಕ್ಷಯ್ ಇಲ್ಲದಿದ್ದರೆ ತಾನು ಇಷ್ಟು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ ಎನ್ನುತ್ತಾರೆ. 'ಆರಂಭದಲ್ಲಿ ನಾನು, ಅಕ್ಷಯ್ ಹಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದೇವೆ. ನಾನು ಕ್ಯೂಟ್ ಆಗಿದ್ದೆ ಮತ್ತು ತಮಾಷೆ ಮಾಡುತ್ತಿದ್ದೆ. ಅಕ್ಷಯ್ ಬಹಳ ಗಂಭೀರವಾಗಿರುತ್ತಿದ್ದರು. ಹಾಗಾಗಿ, ನಮ್ಮ ಜೋಡಿ ಹಿಟ್ ಆಯಿತು ಮತ್ತು ನಾವಿಬ್ಬರು ಹಲವು ಚಿತ್ರಗಳಲ್ಲಿ ನಟಿಸುವಂತಾಯಿತು. ಬಹುಶಃ ಅವರಿಲ್ಲದಿದ್ದರೆ ನಾನು ಪರಿಪೂರ್ಣನಾಗುತ್ತಿರಲಿಲ್ಲ. ಹಾಗೆಯೇ, ನಾನಿಲ್ಲದೆ ಅವರು ಪರಿಪೂರ್ಣರಾಗುತ್ತಿರಲಿಲ್ಲವೇನೋ. ಹಾಗಾಗಿಯೇ, ನಾವಿಬ್ಬರೂ ಇವತ್ತಿಗೂ ಒಳ್ಳೆಯ ಗೆಳೆಯರಾಗಿ ಉಳಿದುಕೊಂಡಿದ್ದೇವೆ' ಎನ್ನುತ್ತಾರೆ ಸೈಫ್ ಅಲಿ ಖಾನ್.