ಸಿನಿವಾಣಿ

ನಿಮ್ಮ ಶೋಗೆ ಈವರೆಗೂ ಕೊಹ್ಲಿಯನ್ನು ಏಕೆ ಆಹ್ವಾನಿಸಿಲ್ಲ? ಕರಣ್ ಜೋಹರ್ ಕೊಟ್ಟ ಉತ್ತರ ಹೀಗಿದೆ... Karan Johar

ಮುಂಬೈ: ಬಾಲಿವುಡ್​ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ( Karan Johar ) ಅವರು 'ಕಾಫಿ ವಿತ್ ಕರಣ್' ಹೆಸರಿನಲ್ಲಿ ಬಹಳ ಜನಪ್ರಿಯ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಶಾರುಖ್​, ಸಲ್ಮಾನ್​, ಆಮೀರ್​ ಹಾಗೂ ಅಕ್ಷಯ್​ ಸೇರಿದಂತೆ ಬಾಲಿವುಡ್​ ದಿಗ್ಗಜರೇ ಈ ಶೋನಲ್ಲಿ ಭಾಗವಹಿಸಿದ್ದಾರೆ. ವೀರೇಂದ್ರ ಸೆಹ್ವಾಗ್​, ಹಾರ್ದಿಕ್​ ಪಾಂಡ್ಯ ಮತ್ತು ಕೆ.ಎಲ್​. ರಾಹುಲ್​ರಂತಹ ಖ್ಯಾತ ಕ್ರಿಕೆಟಿಗರು ಕೂಡ ಇದರಲ್ಲಿ ಭಾಗವಹಿಸಿದ್ದಾರೆ.

ಘಟಾನುಘಟಿಗಳೇ ಈ ಶೋನಲ್ಲಿ ಭಾಗವಹಿಸಿರುವಾಗ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತರಾದ ವಿರಾಟ್​ ಕೊಹ್ಲಿ ( Virat Kohli ) ಮಾತ್ರ ಏಕೆ ಶೋನಲ್ಲಿ ಭಾಗಿಯಾಗಿಲ್ಲ ಎಂಬ ಪ್ರಶ್ನೆ ಇದೆ. ವಿರಾಟ್​ ಕೊಹ್ಲಿ... ಈ ಹೆಸರೇ ಸಾಕು ಯಾವುದೇ ಕಾರ್ಯಕ್ರಮ ಹಿಟ್​ ಆಗಲು. ಕೊಹ್ಲಿ ಎಲ್ಲೇ ಹೋದರು ಅಲ್ಲಿ ಜನ ಸಾಗರವೇ ಹರಿದು ಬರುತ್ತದೆ. ಕ್ರೀಸ್​ಗೆ ಬಂದರೆ ಇಡೀ ಮೈದಾನದಲ್ಲಿ ಕೊಹ್ಲಿ ಜಪ ಶುರುವಾಗುತ್ತದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಕೊಹ್ಲಿಗೆ ವಿಶೇಷ ಅಭಿಮಾನ ಬಳಗವಿದೆ. ಹೀಗಿರುವಾಗ ಕೊಹ್ಲಿ ಮಾತ್ರ ಏಕೆ ಈ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಆ ಪ್ರಶ್ನೆಗೆ ಕೊನೆಗೂ ಕರಣ್​ ಜೋಹರ್​ ಅವರೇ ಉತ್ತರ ನೀಡಿದ್ದಾರೆ.

ಅಂದಹಾಗೆ, ವಿರಾಟ್ ಕೊಹ್ಲಿ ಅವರ ಧರ್ಮಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಲವಾರು ಬಾರಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆದರೆ, ಕೊಹ್ಲಿ ಮಾತ್ರ ಏಕೆ ಅತಿಥಿಯಾಗಿ ಬಂದಿಲ್ಲ? ಈ ಕುರಿತು ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಕರಣ್​ ಜೋಹರ್​ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಕರಣ್​ ಏನು ಉತ್ತರ ಕೊಟ್ಟರು ಅನ್ನೋದನ್ನು ಮುಂದೆ ನೋಡೋಣ.

2019 ರಲ್ಲಿ ನಡೆದ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅತಿಥಿಗಳಾಗಿ ಕಾಣಿಸಿಕೊಂಡರು. ಈ ಶೋ ಬಳಿಕ ಅನೇಕ ಟೀಕೆಗಳು ಬಂದವು. ಈ ಟೀಕೆಗಳೇ ವಿರಾಟ್ ಕೊಹ್ಲಿ ಗೈರುಹಾಜರಿಗೆ ಮುಖ್ಯ ಕಾರಣ ಎಂದು ಕರಣ್ ಬಹಿರಂಗಪಡಿಸಿದ್ದಾರೆ. ಆ ಘಟನೆ ನಡೆದ ಬಳಿಕ ವಿರಾಟ್ ಅವರನ್ನು ಶೋನಲ್ಲಿ ಭಾಗವಹಿಸುವಂತೆ ನಾನೆಂದಿಗೂ ಕೇಳಿಲ್ಲ ಮತ್ತು ಯಾವುದೇ ಕ್ರಿಕೆಟಿಗನನ್ನು ಸಂದರ್ಶನಕ್ಕೆ ಹಾಜರಾಗುವಂತೆ ಮನವಿ ಮಾಡಲಿಲ್ಲ ಎಂದು ಕರಣ್​ ತಿಳಿಸಿದರು.

ಅಷ್ಟಕ್ಕೂ ಹಾರ್ದಿಕ್​-ರಾಹುಲ್​ ಶೋ ವೇಳೆ ಏನಾಯ್ತು?

2019 ರಲ್ಲಿ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಹಾರ್ದಿಕ್ ಮಹಿಳೆಯರ ಬಗ್ಗೆ ಲಿಂಗಭೇದ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ದೊಡ್ಡ ವಿವಾದ ಸೃಷ್ಟಿಯಾಗಿ ಬಿಸಿಸಿಐ ಇಬ್ಬರನ್ನೂ ಆಸ್ಟ್ರೇಲಿಯಾ ಸೀರೀಸ್‌ನಿಂದ ಅಮಾನತುಗೊಳಿಸಿತ್ತು. ಈ ಬಗ್ಗೆ ಕೆ.ಎಲ್. ರಾಹುಲ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, ಈ ಘಟನೆ ನನ್ನನ್ನು ತೀವ್ರವಾಗಿ ಗಾಯಗೊಳಿಸಿತು ಎಂದರು. ಇನ್ನು ಈ ಘಟನೆಯ ನಂತರ, ಕರಣ್ ಜೋಹರ್ ಕೂಡ ಕ್ರಿಕೆಟಿಗರನ್ನು ಶೋಗೆ ಆಹ್ವಾನಿಸುವುದನ್ನು ನಿಲ್ಲಿಸಿದರು. (ಏಜೆನ್ಸೀಸ್​)