ಸಿನಿವಾಣಿ

ಚಿರಂಜೀವಿ ಕಂಡರೆ ಶ್ರೀರೆಡ್ಡಿಗೆ ಕೋಪ ಯಾಕೆ?

chetannadiger

ಅದೇನೋ ಗೊತ್ತಿಲ್ಲ, ಟಾಲಿವುಡ್​ನಲ್ಲಿ ಚಿರಂಜೀವಿ ಕಂಡರೆ ಒಂದಿಷ್ಟು ಜನ ಉರಿದುರಿದು ಬೀಳುತ್ತಾರೆ. ಹಿಂದೊಮ್ಮೆ ಮೋಹನ್​ ಬಾಬುಗೆ ಚಿರಂಜೀವಿ ಕಂಡರೆ ಅದೇನೋ ಅಸಹನೆ. ಆ ನಂತರ ಡಾ. ರಾಜಶೇಖರ್​ ಸಹ ಚಿರಂಜೀವಿ ಎದುರು ಜಗಳ ಮಾಡೋಕೆ ನಿಂತುಬಿಡೋರು. ಈಗ ಆ ಸಾಲಿಗೆ ಗ್ಲಾಮರ್​ ಗೊಂಬೆ ಶ್ರೀರೆಡ್ಡಿ ಸಹ ಸೇರಿಬಿಟ್ಟಿದ್ದಾರೆ.

ಮೆಗಾಸ್ಟಾರ್​ ಚಿರಂಜೀವಿ ಅವರಿಗೂ ಶ್ರೀರೆಡ್ಡಿಗೂ ಅದೇನು ವೈರತ್ವವೋ ಗೊತ್ತಿಲ್ಲ. ಅಷ್ಟೇ ಅಲ್ಲ, ಶ್ರೀರೆಡ್ಡಿಗೆ ಚಿರಂಜೀವಿ ಏನು ತೊಂದರೆ ಕೊಟ್ಟರು ಎಂಬುದೂ ಯಾರಿಗೂ ಗೊತ್ತಿಲ್ಲ. ಆದರೆ, ಶ್ರೀರೆಡ್ಡಿ ಮಾತ್ರ ಅವಕಾಶ ಸಿಕ್ಕಾಗಲೆಲ್ಲಾ ಮೆಗಾಸ್ಟಾರ್​ ಮೇಲೆ ಕೆಸರೆರಚುವುದಕ್ಕೆ ರೆಡಿಯಾಗಿರುತ್ತಾರೆ ಎಂದು ಟಾಲಿವುಡ್​ ಮಂದಿ ಯಾವಾಗಲೂ ಮಾತಾಡಿಕೊಳ್ಳುತ್ತಾರೆ.

ಇದೀಗ ಶ್ರೀರೆಡ್ಡಿ ಮತ್ತೊಮ್ಮೆ ಚಿರಂಜೀವಿ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಬುಧವಾರ (ಜೂನ್​ 10) ಹಿರಿಯ ನಟ ಬಾಲಕೃಷ್ಣ ಅವರ ಹುಟ್ಟುಹಬ್ಬ. 60ನೇ ವರ್ಷಕ್ಕೆ ಕಾಲಿಟ್ಟಿರುವ ಬಾಲಕೃಷ್ಣ ಅವರಿಗೆ ಬರೀ ಟಾಲಿವುಡ್​ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಹಲವು ಗಣ್ಯರು ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀರೆಡ್ಡಿ ಸಹ ಸೋಷಿಯಲ್​ ಮೀಡಿಯಾ ಮೂಲಕ ಬಾಲಕೃಷ್ಣ ಅವರಿಗೆ ಶುಭ ಹಾರೈಸಿದ್ದಾರೆ.

ಬರೀ ಶುಭ ಹಾರೈಸಿದ್ದರೆ ಸುಮ್ಮನಾಗಬಹುದಿತ್ತು. ಶ್ರೀರೆಡ್ಡಿ ಅಲ್ಲೊಂದು ಕೊಕ್ಕೆ ಇಟ್ಟಿದ್ದಾರೆ. ಬಾಲಕೃಷ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವ ಅಗತ್ಯ ಇಲ್ಲ. ಏಕೆಂದರೆ, ಅವರ ನಗುವೆ ದೊಡ್ಡ ಪ್ರಶಸ್ತಿ. ಬಾಲಕೃಷ್ಣ ಅವರು ಪ್ರೀತಿಯಿಂದ, ತಮ್ಮ ಅಭಿಮಾನಿಗಳ ಕೆನ್ನೆಗೆ ಹೊಡೆಯುತ್ತಾರೆ. ಅವರು ಚಿರಂಜೀವಿ ತರಹ ಇಲ್ಲ. ಚಿರಂಜೀವಿ ಏನಿದ್ದರೂ ಹೊಟ್ಟೆ ಮೇಲೆ ಹೊಡೆಯುತ್ತಾರೆ ಎಂದು ಚಿರಂಜೀವಿ ಬಗ್ಗೆ ಲೇವಡಿ ಮಾಡಿದ್ದಾರೆ ಶ್ರೀರೆಡ್ಡಿ.

ಬಾಲಕೃಷ್ಣ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುವುದು ಒಳ್ಳೆಯದೇ. ಆದರೆ, ಈ ವಿಷಯದಲ್ಲಿ ಚಿರಂಜೀವಿ ಅವರನ್ನು ಯಾಕೆ ಎಳೆದು ತರಬೇಕಿತ್ತು ಎಂಬುದು ಎಲ್ಲರ ಪ್ರಶ್ನೆ. ಎಲ್ಲಾ ಸರಿ, ಇಷ್ಟಕ್ಕೂ ಶ್ರೀರೆಡ್ಡಿಗೆ ಚಿರಂಜೀವಿ ಮತ್ತು ಅವರ ಕುಟುಂಬದ ಮೇಲೆ ಅಷ್ಟೊಂದು ಕೋಪ ಯಾಕೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದಕ್ಕೆ ಶ್ರೀರೆಡ್ಡಿ ಇದುವರೆಗೂ ಉತ್ತರಿಸಿಲ್ಲ. ಮುಂದೆಂದಾದರೂ ಈ ಪ್ರಶ್ನೆಗೆ ಉತ್ತರ ಸಿಗುತ್ತದಾ ನೋಡಬೇಕು.