

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯವಾಗಿರುವ ಸೆಲೆಬ್ರಿಟಿಗಳ ಪೈಕಿ ರಾಮ್ಗೋಪಾಲ್ ವರ್ಮಾ ಸಹ ಒಬ್ಬರು. ಸದಾ ಒಂದಲ್ಲಾ ಒಂದು ವಿಷಯದ ಕುರಿತಾಗಿ ಮಾತನಾಡುತ್ತಾ, ಹಲವು ಬಾರಿ ಠೀಕೆಗೊಳಗಾಗುತ್ತಾ ಇರುವ ವರ್ಮಾ, ಜನ ತಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ ಎಂದು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಅವರು, ಇದೇ ಕಾರಣಕ್ಕೆ ಹಲವರಿಂದ ಮೆಚ್ಚುಗೆ ಗಳಿಸಿದ್ದಾರೆ.
ಈಗ ವರ್ಮಾ ಮತ್ತೊಮ್ಮೆ ಟ್ರೋಲ್ಗೊಳಗಾಗಿದ್ದಾರೆ. ಟಾಲಿವುಡ್ನ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳ ಅವಕೃಪೆಗೆ ಪಾತ್ರರಾಗಿದ್ದಾರೆ. ಅದಕ್ಕೆ ಕಾರಣ, ಬಾಲಕೃಷ್ಣ ಅವರ ಕುರಿತಾಗಿ ವರ್ಮಾ ಟ್ವೀಟ್ ಮಾಡಿರುವುದು. ಇಷ್ಟಕ್ಕೂ ವರ್ಮಾ ಅವರು ಬಾಲಕೃಷ್ಣ ಅವರನ್ನು ಹೊಗಳುತ್ತಿದ್ದಾರಾ ಅಥವಾ ಕಾಲೆಳೆಯುತ್ತಿದ್ದಾರಾ ಎಂಬುದೇ ಹಲವರಿಗೆ ಗೊತ್ತಾಗದಂತಾಗಿದೆ. ಆ ರೀತಿ ಬಹಳ ನಾಜೂಕಾಗಿ ವರ್ಮಾ ಅವರು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಬಾಲಕೃಷ್ಣ ಅವರು ಇತ್ತೀಚೆಗೊಂದು ಹಾಡನ್ನು ಹಾಡಿ, ಅದನ್ನು ಯೂಟ್ಯೂಬ್ನ ತಮ್ಮ ಚಾನಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಎನ್.ಟಿ.ಆರ್ ಅಭಿನಯದ ಜಗದೇಕವೀರುನಿ ಕಥಾ ಚಿತ್ರದ ಶಿವಶಂಕರಿ ಶಿವಾನಂದ ಲಹರಿ ಎಂಬ ಜನಪ್ರಿಯ ಹಾಡನ್ನು ಹಾಡುವ ಪ್ರಯತ್ನ ಮಾಡಿದ್ದಾರೆ. ಬಹಳ ಕ್ಲಿಷ್ಟಕರವಾದ ಈ ಹಾಡನ್ನು ಬಾಲಕೃಷ್ಣ ಅವರು ತಮ್ಮದೇ ರೀತಿಯಲ್ಲಿ ಹಾಡಿದ್ದಾರೆ. ಕೆಲವರು ಈ ವಯಸ್ಸಿನಲ್ಲೂ ಬಾಲಕೃಷ್ಣ ಇಂಥದ್ದೊಂದು ಹಾಡು ಹಾಡಿರುವುದು ಬಹಳ ಖುಷಿಯಾಗಿದೆ ಎಂದರೆ, ಇನ್ನೂ ಕೆಲವರು ಚೆಂದದ ಹಾಡನ್ನು ಕೆಟ್ಟದಾಗಿ ಹಾಡುವ ಮೂಲಕ ಅದನ್ನು ಕೆಡಿಸಿರುವುದಷ್ಟೇ ಅಲ್ಲ, ದೊಡ್ಡ ಪಾಪ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ
ಇದಕ್ಕೆ ಆರ್ಜಿವಿ ಸಹ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಇವರು ಹಾಡುವುದನ್ನು ಕೇಳಿದರೆ, ಮೊಹಮ್ಮದ್ ರಫಿ ಮತ್ತು ಎಸ್.ಪಿ.ಬಿ ಗಾಯನದಲ್ಲಿ ಜ್ಯೂನಿಯರ್ಗಳೆಂದನಿಸುತ್ತದೆ. ಈ ಹಾಡು ಕೇಳಿ ಕೇಳುಗರ ಹೃದಯದ ಬಡಿತ ಇನ್ನೂ ಹೆಚ್ಚಾಗುತ್ತದೆ. ಒಥೆಲ್ಲೋನ ಬಲಾಡ್ ಮತ್ತು ಶಂಕರ ಶಾಸ್ತ್ರಿಗಳು ಜತೆಯಾದರೆ, ಹೇಗಿರುತ್ತದೋ ಹಾಗಿರುತ್ತದೆ ಎಂದು ಆರ್ಜಿವಿ ಅಭಿಪ್ರಾಯಪಟ್ಟಿದ್ದಾರೆ.
ಆರ್ಜಿವಿ ಅವರ ಈ ಟ್ವೀಟ್ ನೋಡಿ, ಬಾಲಕೃಷ್ಣ ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಬಾಲಕೃಷ್ಣ ಅವರ ಗಾಯನದ ಬಗ್ಗೆ ಈ ರೀತಿ ಜೋಕ್ ಮಾಡುವುದು ತರವಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಇನ್ನೊಂದು ಟ್ವೀಟ್ನಲ್ಲಿ ಪ್ರತಿಕ್ರಿಯಿಸಿರುವ ಆರ್ಜಿವಿ, ಕೆಲವು ಕೆಟ್ಟ ಜನರು ನಾನು ಜೋಕ್ ಮಾಡುತ್ತಿದ್ದೀನಿ ಅಂದುಕೊಂಡಿದ್ದಾರೆ. ಬಾಲಯ್ಯ (ನಂದಮೂರಿ ಬಾಲಕೃಷ್ಣ) ಮತ್ತು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೀನಿ, ಇದು ಜೋಕ್. ಸಂಗೀತದ ಅನ್ವೇಷಣೆಯಾದ ಮೇಲೆ, ನಾನು ಕೇಳಿರುವ ಅತ್ಯಂತ ಅದ್ಭುತವಾದ ಹಾಡಿದು. ಬಹುಶಃ ಇದನ್ನು ಕೇಳಿ, ಸ್ವರ್ಗದಲ್ಲಿರುವ ಎನ್ಟಿಆರ್ ಖುಷಿಯಿಂದ ಕುಣಿದಾಡುತ್ತಿರಬಹುದು ಎಂದು ಬರೆದುಕೊಂಡಿದ್ದಾರೆ.
ಈಗ ಹೇಳಿ ರಾಮ್ಗೋಪಾಲ್ ವರ್ಮಾ ಹೊಗಳ್ತಿದ್ದಾರಾ ಅಥವಾ ಕಾಲೆಳೆಯುತ್ತಿದ್ದಾರಾ ಎಂದು?