ಸಿನಿವಾಣಿ

'ದಿ ಫ್ಯಾಮಿಲಿ ಮ್ಯಾನ್​' ವಿವಾದ: ಸಮಂತಾ ಯಾಕೆ ಮಾತಾಡ್ತಿಲ್ಲ?

ಹೈದರಾಬಾದ್​: ಸಮಂತಾ ಮೊದಲ ಬಾರಿಗೆ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಿ ಫ್ಯಾಮಿಲಿ ಮ್ಯಾನ್​ 2', ಜೂನ್​ ನಾಲ್ಕರಿಂದ ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಲಿದೆ. ಈ ಮಧ್ಯೆ, ಈ ಕಾರ್ಯಕ್ರಮವನ್ನು ಬಿಡುಗಡೆ ಮಾಡಬಾರದು ಎಂದು ಹಲವರು ಒತ್ತಾಯ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ, ಸಮಂತಾ ಮಾತ್ರ ಯಾಕೆ ಮಾತಾಡುತ್ತಿಲ್ಲ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಹೌದು, ತಮಿಳರ ಭಾವನೆಗಳಿಗೆ ಧಕ್ಕೆ ತರುವ ಅಂಶಗಳು 'ದಿ ಫ್ಯಾಮಿಲಿ ಮ್ಯಾನ್​' ಕಾರ್ಯಕ್ರಮದಲ್ಲಿರುವುದರಿಂದ, ಬಿಡುಗಡೆ ಮಾಡಬಾರದು ಎಂದು ನಾಮ್​ ತಮಿಳರ್​ ಕಚ್ಚಿ (ಎನ್​ಟಿಕೆ) ಸಂಘಟನೆಯ ಸಂಸ್ಥಾಪಕ ಸೀಮನ್​ ಸೇರಿದಂತೆ ಹಲವರು ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ಮನೋಜ್​ ಬಾಜ್ಪೇಯಿ, ನಿರ್ದೇಶಕರಾದ ರಾಜ್​-ಡಿಕೆ ಸೇರಿದಂತೆ ಹಲವರು ಮಾತನಾಡಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶದಿಂದ ಈ ವೆಬ್​ಸೀರೀಸ್​ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಸಮಂತಾ ಮಾತ್ರ ಇದುವರೆಗೂ ಒಂದೇ ಒಂದು ಮಾತನ್ನಾಡಿಲ್ಲ.

ಇಷ್ಟಕ್ಕೂ ಸಮಂತಾ ಯಾಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಪ್ರಶ್ನೆ ಬರಬಹುದು. ಮೂಲಗಳ ಪ್ರಕಾರ, ಈ ವೆಬ್​ಸರಣಿ ಸ್ಟ್ರೀಮ್​ ಆಗುವವರೆಗೂ ಮಾತಾಡಬೇಡಿ ಎಂದು ಅಮೇಜಾನ್​ ಪ್ರೈಮ್​ನವರು ಆದೇಶ ಹೊರಡಿಸಿದ್ದಾರಂತೆ. ಈ ವಿವಾದಗಳು ರಾಜಕೀಯ ರೂಪ ಪಡೆಯುತ್ತಿರುವುದರಿಂದ, ಈ ಸಂದರ್ಭದಲ್ಲಿ ಮಾತಾಡಿ ಏನಾದರೂ ಯಡವಟ್ಟಾದರೆ, ಕಾರ್ಯಕ್ರಮ ನಿಂತು ಹೋಗುವ ಸಾಧ್ಯತೆ ಇದೆ. ಅದೇ ಕಾರಣದಿಂದ ಸಮತಾ ಸೇರಿದಂತೆ, ಚಿತ್ರತಂಡದ ಹಲವರಿಗೆ ಏನೂ ಮಾತಾಡಬೇಡಿ ಎಂಬ ಸಂದೇಶ ರವಾನೆಯಾಗಿರುವುದರಿಂದ, ಎಲ್ಲರೂ ಸುಮ್ಮನೆ ಇದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಈ ವೆಬ್​ಸರಣಿಯ ಟ್ರೇಲರ್​ ಹಿಟ್​ ಆಗಿದ್ದು, ಒಂದೇ ದಿನದಲ್ಲಿ 15 ಮಿಲಿಯನ್​ ವೀಕ್ಷಣೆ ಪಡೆದ ಮೊದಲ ಭಾರತೀಯ ವೆಬ್​ಸೀರೀಸ್​ ಟ್ರೇಲರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.