ಗುಟ್ಟಾಗಿ ಮದ್ವೆಯಾಗಿದ್ದಕ್ಕೆ ಕಾರಣ ಕೊಟ್ಟು ಕ್ಷಮೆ ಕೋರಿದ ನಟಿ ಪ್ರಣೀತಾ!

pranitha
Published on

ಬೆಂಗಳೂರು: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಗುಟ್ಟಾಗಿ ನಿನ್ನೆ(ಮೇ 30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಕುರಿತು ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಸ್ಪಷ್ಟನೆ ಕೊಟ್ಟಿದ್ದಾರೆ.

ಉದ್ಯಮಿ ನಿತಿನ್ ರಾಜು ಜತೆ ನಟಿ ಪ್ರಣೀತಾ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಷ್ಟೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯಾದರೂ ಇನ್ನೂ ಏಕೆ ಈ ಬಗ್ಗೆ ಪ್ರಣೀತಾ ಖಚಿಪಡಿಸಿಲ್ಲ. ಇದು ವದಂತಿಯೇ? ಅಥವಾ ನಿಜಕ್ಕೂ ಮದುವೆ ಆಗಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಮೂಡಿತ್ತು. ಇದೀಗ ಸ್ವತಃ ನಟಿಯೇ ತನ್ನ ಮದುವೆ ಆಗಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಪೋಸ್ಟ್​ ಮಾಡಿದ್ದಾರೆ.

ಸುದೀರ್ಘ ಪತ್ರ ಬರೆದಿರುವ ಪೋಸ್ಟ್ ಅನ್ನು ನಟಿ ಪ್ರಣಿತಾ ದಂಪತಿ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. '2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮದುವೆಯ ದಿನಾಂಕ ಅರ್ಜೆಂಟಾಗಿ ನಿಗದಿಯಾಯಿತು. ಕರೊನಾ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಕರೊನಾ ನಿಯಮವನ್ನ ಕಟ್ಟುನಿಟ್ಟಾಗಿ ನಾವೂ ಪಾಲಿಸಬೇಕಿದೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ' ಎಂದು ಕೋರಿದ್ದಾರೆ.

ದರ್ಶನ್​ ಅಭಿನಯದ 'ಪೊರ್ಕಿ' ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಮೂಲಗಳ ಪ್ರಕಾರ ನಟಿ ಪ್ರಣೀತಾ ಅದ್ದೂರಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆ ಸರಳ ವಿವಾಹ ನೆರವೇರಿದೆ. ಇನ್ನು ಪ್ರಣೀತಾರನ್ನು ಕೈಹಿಡಿದ ವರ ನಿತಿನ್​ ರಾಜ್​ ಬೆಂಗಳೂರಿನವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net