ಸಿನಿವಾಣಿ

ಯಾರೋ ಒಬ್ಬ ನನಗೆ ಕರೆ ಮಾಡಿ… 20ನೇ ವಯಸ್ಸಿನಲ್ಲಿ ನಡೆದ ಕಹಿ ಘಟನೆಯನ್ನು ನೆನೆದ ರೆಜಿನಾ

ಹೈದರಾಬಾದ್​: ನಟ ಚೇತನ್​ ಅಭಿನಯ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್​ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್​ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.

ಈ ಹಿಂದೆ ಶಾಕಿನಿ ಡಾಕಿನಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರೆಜಿನಾ ಕ್ಯಾಸ್ಸಂದ್ರ ಮತ್ತು ನಿವೇತಾ ಥಾಮಸ್ ಪ್ರಚಾರಕ್ಕಾಗಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ರಜಿನಾ ಅವರು ವಯಸ್ಕರ ಜೋಕ್ಸ್​ ಮಾಡಿದ್ದರು. ನನ್ನ ಬಳಿ ಹೇಳಲು ಒಂದು ಜೋಕ್ಸ್​ ಇದೆ. ಅದನ್ನು ನೀವು ಅರ್ಥ ಮಾಡಿಕೊಳ್ತೀರೋ? ಇಲ್ಲವೋ? ನನಗೆ ಗೊತ್ತಿಲ್ಲ, ಅದೇನೇ ಇರಲಿ, ಪುರುಷರು ಮತ್ತು ಮ್ಯಾಗಿ ಎರಡು ಕೂಡ ಒಂದೆ. ಏಕೆಂದರೆ, ಎರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಎಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಭಾರೀ ಚರ್ಚೆಯಾಗಿತ್ತು.

ತುಂಬಾ ಬೋಲ್ಡ್​ ಆಗಿ ಮಾತನಾಡುವ ರಜಿನಾ ಅವರಿಗೂ ಕಾಸ್ಟಿಂಗ್​ ಕೌಚ್​ ಅನುಭವ ಆಗಿದೆ. ಇದನ್ನು ಸ್ವತಃ ರಜಿನಾ ಅವರೇ ಇತ್ತೀಚಗೆ ನಡೆದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ನಾನು ಕಾಸ್ಟಿಂಗ್​ ಕೌಚ್​ ಅನುಭವಿಸಿದ್ದೇನೆ. ಯಾರೋ ಒಬ್ಬ ನನಗೆ ಕರೆ ಮಾಡಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದರು ಎಂದು ಹೇಳಿದರು.

ಆಗ ನನಗೆ ಕೇವಲ 20 ವರ್ಷ ವಯಸ್ಸು. ಹೊಂದಾಣಿಕೆ ಏನು ಎಂಬುದು ನನಗೆ ಅರ್ಥವಾಗಲಿಲ್ಲ. ಬಹುಶಃ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಬಗ್ಗೆ ಕೇಳುತ್ತಿದ್ದಾರೆ ಅಂದುಕೊಂಡೆ. ಆದರೆ, ನಮ್ಮ ಮ್ಯಾನೇಜರ್​ ನಿಮ್ಮ ಜತೆ ಮಾತನಾಡಲಿದ್ದಾರೆ ಎಂದು ಹೇಳಿದರು. ಬಳಿಕ ಮ್ಯಾನೇಜರ್​ ನನ್ನ ಜತೆ ಮಾತನಾಡಿ ಬೇರೆ ರೀತಿಯ ಹೊಂದಾಣಿಕೆ ಬಗ್ಗೆ ಕೇಳಿದರು ಎಂದರು.

ಈ ಘಟನೆಯ ಬಳಿಕ ನಾನು ವೈಯಕ್ತಿಕವಾಗಿ ಇಂಥಹ ಯಾವುದೇ ಪರಿಸ್ಥಿತಿಯನ್ನು ಎದುರಿಸಿಲ್ಲ ಎಂದು ರೆಜಿನಾ ಇದೇ ಸಂದರ್ಭದಲ್ಲಿ ತಿಳಿಸಿದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ರೆಜಿನಾ ಅವರು ಮೂರು ತಮಿಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾರ್ಡರ್​, ಫ್ಲ್ಯಾಶ್​ಬ್ಯಾಕ್​ ಮತ್ತು ಸೂರ್ಪನಗೈ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)