ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 650ಕ್ಕೂ ಅಧಿಕ ಕೋಟಿ ರೂ. ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರಣಬೀರ್ ಕಪೂರ್ ಸಿನಿ ಕೆರಿಯರ್ನಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬ ಆರೋಪವಿದ್ದರೂ ಕೂಡ ಗಳಿಕೆಯಲ್ಲಿ ಈ ಸಿನಿಮಾ ಹಿಂದೆ ಬೀಳಲಿಲ್ಲ.
ಈ ಚಿತ್ರದ ಎಲ್ಲ ಪಾತ್ರಗಳು ಕೂಡ ಸಿನಿ ರಸಿಕರ ಮನದಲ್ಲಿ ಉಳಿದಿದೆ. ಅದರಲ್ಲೂ ಚಿತ್ರದ ಅಬ್ರಾರ್ ಹಕ್ (ಬಾಬಿ ಡಿಯೋಲ್) ಖಳನಟನ ಪಾತ್ರವು ವೀಕ್ಷಕರ ಗಮನ ಸೆಳೆದಿದೆ. ಅದಕ್ಕೆ ಕಾರಣ ಅವರ ಇಂಟ್ರಡಕ್ಷನ್‌ಗೆ ಬಳಸಿದ ಜಮಾಲ್ ಕುಡು ಹಾಡು. ಸಾಮಾಜಿಕ ಜಾಲತಾಣದಲ್ಲಿ ಎತ್ತ ನೋಡಿದರೂ ಬರೀ ಜಮಾಲ್ ಕುಡು ಹಾಡೇ ಮೊಳಗುತ್ತಿದೆ. ಸಿನಿಮಾದ ಕಲೆಕ್ಷನ್ ತಗ್ಗಿದರೂ ಜಮಾಲ್ ಕುಡು ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಜಾಲತಾಣದಲ್ಲಿ ರಣಬೀರ್ಗಿಂತ ಬಾಬಿ ಡಿಯೋಲ್ ದರ್ಶನವೇ ಜಾಸ್ತಿಯಾಗಿದೆ. ಅಷ್ಟರ ಮಟ್ಟಿಗೆ ಜಮಾಲ್ ಕುಡು ಹಾಡು ವೈರಲ್ ಆಗಿದ್ದು, ಸಾಕಷ್ಟು ಮಂದಿ ಈ ಹಾಡಿಗೆ ರೀಲ್ಸ್ ಮತ್ತು ಶಾರ್ಟ್ಸ್ ಮಾಡಿ ಹರಿಬಿಟ್ಟಿದ್ದಾರೆ.
ಹಾಡಿನ ಮೂಲವೇನು?
ಜಮಾಲ್ ಕುಡು ಹಾಡೇನೋ ತುಂಬಾ ಚೆನ್ನಾಗಿದೆ. ಯಾರನ್ನೇ ಕೇಳಿದರೂ ಸಖತ್ತಾಗಿದೆ ಎಂದು ಹೇಳುತ್ತಾರೆ. ಆದರೆ, ಅದರ ಅರ್ಥವೇನು ಎಂದು ಪ್ರಶ್ನೆ ಮಾಡಿದರೆ ಬಹುತೇಕರು ಉತ್ತರಿಸಲಾರರು. ಆದರೆ, ಅದಕ್ಕೆ ಉತ್ತರ ಇಲ್ಲಿದೆ. ಜಮಾಲ್ ಕುಡು ಎಂಬುದು ಒಂದು ಇರಾನಿಯನ್ ಹಾಡಾಗಿದೆ. ಸಂಗೀತ ಸಂಯೋಜಕ ಹರ್ಷವರ್ಧನ್ ರಾಮೇಶ್ವರ್ ಅವರು ಅನಿಮಲ್ ಚಿತ್ರದಲ್ಲಿ ಈ ಹಾಡಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಮೂಲತಃ ಈ ಹಾಡನ್ನು ಇರಾನ್ನ ಖತರೆಹ್ ಗುಂಪು ಸಂಯೋಜನೆ ಮಾಡಿದೆ. 1950ರ ದಶಕದಲ್ಲಿ ಖರಾಜೆಮಿ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಂದಹಾಗೆ ಜಮಾಲ್ ಜಮಾಲೂ ಕುಡು ಹಾಡು ಪ್ರಸಿದ್ಧ ಇರಾನಿನ ಕವಿ ಬಿಜನ್ ಸಮಂದರ್ ಬರೆದ ಕವಿತೆಯ ರೂಪಾಂತರವಾಗಿದೆ. ಅನಿಮಲ್ ಸಿನಿಮಾದಲ್ಲಿ ಈ ಪ್ರಸಿದ್ಧವಾದ ಬೆನ್ನಲ್ಲೇ ಹಾಡಿನ ಹಳೆಯ ವರ್ಷನ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಶೇರ್ ಮಾಡಲಾಗುತ್ತಿದ್ದು, ಸಿನಿಮಾದಲ್ಲಿ ಬಳಸಿರುವ ಹೊಸ ಹಾಡಿಗಿಂತ ಹಳೆಯ ಹಾಡನ್ನೇ ಜನರು ಹೆಚ್ಚು ಆನಂದಿಸುತ್ತಿದ್ದಾರೆ.
ಹಾಡಿನ ಅರ್ಥವೇನು?
ಜಮಾಲ್ ಜಮಾಲೇಕ್ ಜಮಾಲೂ ಜಮಲ್ ಕುಡು ಎಂದು ಆರಂಭವಾಗುವ ಹಾಡಿನ ಮೊದಲ ಸಾಲಿನ ಅರ್ಥವೇನೆಂದರೆ, ಓ ನನ್ನ ಪ್ರೀತಿಯೇ, ನನ್ನ ಪ್ರೀತಿಯೇ, ನನ್ನ ಸಿಹಿಯಾದ ಪ್ರೀತಿಯೇ! ಎಂಬುದಾಗಿದೆ.
* ಅಹಯ್ ಸಿಯಾಹ್ ಜಂಗಿ, ಡೆಲಾಮೊ ನಕೋನ್ ಖುನ್ (ಓಹ್ ನನ್ನ ಮೋಹನಾಂಗಿ, ನನ್ನ ಹೃದಯದೊಂದಿಗೆ ಆಟವಾಡಬೇಡ)
* ವೋಯ್ ತೊ ರಫ್ತಿ ಕೋಜಾ, ಮನಮ್ ಚೊ ಮಜ್ನುನ್ (ನೀನು ಹೊರಟು ಪ್ರಯಾಣ ಪ್ರಾರಂಭಿಸುತ್ತಿರುವೆ ಆದರೆ ನಾನು ಮಜ್ನುವಿನಂತೆ ಹುಚ್ಚನಾಗುತ್ತಿದ್ದೇನೆ)
* ಅಹಯ್ ಸಿಯಾಹ್ ಜಂಗಿ, ಡೆಲಾಮೊ ನಕೋನ್ ಖುನ್ (ಓಹ್ ನನ್ನ ಮೋಹನಾಂಗಿ, ನನ್ನ ಹೃದಯದೊಂದಿಗೆ ಆಟವಾಡಬೇಡ)
* ವೋಯ್ ತೊ ರಫ್ತಿ ಕೋಜಾ, ಮನಮ್ ಚೊ ಮಜ್ನುನ್ (ನೀವು ಹೊರಟು ಪ್ರಯಾಣ ಪ್ರಾರಂಭಿಸುತ್ತಿರುವೆ ಆದರೆ ನಾನು ಮಜ್ನುವಿನಂತೆ ಹುಚ್ಚನಾಗುತ್ತಿದ್ದೇನೆ)
* ಜಮಾಲ್ ಜಮಾಲೇಕ್ ಜಮಾಲೂ ಜಮಲ್ ಕುಡು ಎಂದು ಆರಂಭವಾಗುವ ಹಾಡಿನ ಮೊದಲ ಸಾಲಿನ ಅರ್ಥವೇನೆಂದರೆ, ಓ ನನ್ನ ಪ್ರೀತಿಯೇ, ನನ್ನ ಪ್ರೀತಿಯೇ, ನನ್ನ ಸಿಹಿಯಾದ ಪ್ರೀತಿಯೇ! ಎಂಬುದಾಗಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಡಿಸೆಂಬರ್ 1ರಂದು ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 650 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್ ಸಿನಿಮಾ ಕಮಾಲ್ ಮಾಡುತ್ತಿದೆ. (ಏಜೆನ್ಸೀಸ್)