More

    ಎಲ್ಲೆಂದರಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು… ಅನಿಮಲ್​ ನಿರ್ದೇಶಕನ ಸ್ಫೋಟಕ ಹೇಳಿಕೆ ವೈರಲ್​!

    ಮುಂಬೈ: ವಿವಾದದ ಹೊರತಾಗಿಯೂ ರಣಬೀರ್​ ಕಪೂರ್​ ಅಭಿನಯದ “ಅನಿಮಲ್”​ ಸಿನಿಮಾ 500 ಕೋಟಿ ರೂ.ಗೂ ಅಧಿಕ ಗಳಿಕೆಯೊಂದಿಗೆ ಬಾಕ್ಸ್​​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಚಿತ್ರದ ಬಗ್ಗೆ ಸಿನಿ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಮಾತನಾಡಿದ್ದಾರೆ. ಚಿತ್ರಮಂದಿರದೊಳಗೆ ಮಾತ್ರವಲ್ಲ, ಸಂಸತ್ತಿನ ಒಳಗೂ ಅನಿಮಲ್​ ಸಿನಿಮಾ ಸದ್ದು ಮಾಡಿದೆ. ಹಿಂಸೆಯನ್ನೇ ವೈಭವೀಕರಿಸುವ ಸಿನಿಮಾ ವಿರುದ್ಧ ಸಾಕಷ್ಟು ಆಕ್ರೋಶಗಳು ಕೂಡ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಹಿಂಸೆ ಮಾತ್ರವಲ್ಲದೆ ಮಹಿಳೆಯರನ್ನು ಸಹ ತುಂಬಾ ಕೀಳಾಗಿ ಚಿತ್ರೀಕರಿಸಲಾಗಿದೆ ಎಂಬ ಆರೋಪವೂ ಇದೆ.

    ತೆಲುಗು ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರ ಸಿನಿಮಾಗಳೇ ಹಾಗೇ. ಅವರ ಚಿತ್ರದಲ್ಲಿ ಪುರುಷ ಪಾತ್ರಗಳನ್ನು ಅತ್ಯುನ್ನತ ಎಂಬಂತೆ ಬಿಂಬಿಸುತ್ತಾರೆ ಎಂಬ ಆರೋಪವಿದೆ. ಈ ಹಿಂದೆ ವಿಜಯ್​ ದೇವರಕೊಂಡ ಅಭಿನಯದ ಅರ್ಜುನ್​ ರೆಡ್ಡಿ ಸಿನಿಮಾ ಬಿಡಗಡೆ ಬಳಿಕವೂ ಇದೇ ಆರೋಪ ಕೇಳಿಬಂದಿತ್ತು. ನಟಿ ಅನಸೂಯಾ ಭಾರಧ್ವಜ್ ಅವರು​ ಓಪನ್​ ಆಗಿಯೇ ಸಿನಿಮಾವನ್ನು ತೆಗಳಿದ್ದರು. ಇಂದಿಗೂ ಅನಸೂಯ ಮತ್ತು ವಿಜಯ್​ ದೇವರಕೊಂಡ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇದೇ ಅರ್ಜುನ್​ ರೆಡ್ಡಿ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್​ ಸಿಂಗ್​ ಹೆಸರಿನಲ್ಲಿ ರಿಮೇಕ್​ ಮಾಡಿ ಬಿಡುಗಡೆ ಮಾಡಿದಾಗಲೂ ಇದೇ ಮಾತುಗಳು ಕೇಳಿಬಂದಿದ್ದವು. ಕಬೀರ್​ ಸಿಂಗ್​ ಸಿನಿಮಾದಲ್ಲಿ ನಟ ಶಾಹೀದ್​ ಕಪೂರ್​ ಹೀರೋ ಆಗಿ ನಟಿಸಿದ್ದರು.

    ಇದೀಗ ಅನಿಮಲ್​ ಸಿನಿಮಾ ಕುರಿತು ಟೀಕೆಗಳು ವ್ಯಕ್ತವಾಗಿವೆ. ಮಹಿಳೆಯರನ್ನು ಚಿತ್ರಿಸಿರುವ ರೀತಿ ಸರಿಯಲ್ಲ ಮತ್ತು ನಗ್ನತೆ ಹಾಗೂ ಅಸಭ್ಯತೆಯೇ ಪ್ರಧಾನವಾಗಿದೆ ಎಂದು ಸಾಕಷ್ಟು ಖಂಡನೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ನಿರ್ದೇಶಕ ಸಂದೀಪ್​ ರೆಡ್ಡಿಯ ಹಳೆಯ ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದರಲ್ಲಿ ಸಂದೀಪ್​ ರೆಡ್ಡಿ ಪತ್ನಿಯ ಜತೆಗಿನ ವೈವಾಹಿಕ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಕಬೀರ್​ ಸಿಂಗ್​ ಸಿನಿಮಾ ಬಿಡುಗಡೆ ಸಮಯದಲ್ಲಿ ಈ ಸಂದರ್ಶನವನ್ನು ನೀಡಲಾಗಿತ್ತು. ಇದೀಗ ಅದರ ಸಣ್ಣ ತುಣುಕೊಂಡು ವೈರಲ್​ ಆಗಿದ್ದು, ಅದರಲ್ಲಿ ಸಂದೀಪ್​ ಏನು ಹೇಳಿದ್ದಾರೆ ಅನ್ನೋದನ್ನು ನಾವೀಗ ತಿಳಿಯೋಣ.

    ಪತ್ನಿ ಮತ್ತು ಭಾವನೆ
    ವಿಡಿಯೋದಲ್ಲಿ ಮಹಿಳೆಯ ಮೇಲಿನ ಹಿಂಸೆಗೆ ಸಂದೀಪ್ ರೆಡ್ಡಿ​ ಸಮರ್ಥನೆ ನೀಡಿದ್ದಾರೆ. ಸಂಬಂಧಗಳಲ್ಲಿ ಇರುವ ಭಾವನೆಗಳ ಬಗ್ಗೆ ತಮ್ಮದೇಯಾದ ವ್ಯಾಖ್ಯಾನವನ್ನು ನೀಡಿರುವ ಸಂದೀಪ್​, ನೀವು ನಿಮ್ಮ ಪತ್ನಿಯ ಕಪಾಳಕ್ಕೆ ಹೊಡೆಯದಿದ್ದರೆ, ನೀವು ಎಲ್ಲಿ ಬೇಕು ಅಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು ಸಾಧ್ಯವಾಗದಿದ್ದರೆ, ನೀವು ಮುತ್ತು ಕೊಡಲು ಸಾಧ್ಯವಾಗದಿದ್ದರೆ ಮತ್ತು ಪತ್ನಿಯನ್ನು ಬೈಯ್ಯದಿದ್ದರೆ ಆ ಸಂಬಂಧದಲ್ಲಿ ನಾನು ಭಾವನೆಗಳನ್ನೇ ಕಾಣುವುದಿಲ್ಲ ಎಂದಿದ್ದಾರೆ.

    ಅನಿಮಲ್​ ಸಿನಿಮಾ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ತುಣುಕು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಸಾಕಷ್ಟು ಮಂದಿ ಸಂದೀಪ್​ ಅವರನ್ನು ಟೀಕಿಸುತ್ತಿದ್ದಾರೆ. ಅವರ ಪತ್ನಿಯನ್ನು ದೇವರೇ ಕಾಪಾಡಬೇಕು. ಅವರ ಪತ್ನಿಗಾಗಿ ಎಲ್ಲರು ಪ್ರಾರ್ಥಿಸಿ, ಕೌಟುಂಬಿಕ ಹಿಂಸೆಯನ್ನು ಪ್ರೀತಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಕಪಾಳಮೋಕ್ಷವನ್ನು ಸಮರ್ಥಿಸುತ್ತಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

    ಸಂಸದೆ ಧ್ವನಿ
    ಇತ್ತೀಚೆಗೆ ಚಳಿಗಾಲ ಅಧಿವೇಶನದ ಕಾಂಗ್ರೆಸ್​ ಸಂಸದೆ ರಂಜೀತ್​ ರಂಜನ್​ ಅವರು ಅನಿಮಲ್​ ಸಿನಿಮಾ ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿದರು. ತಮ್ಮ ಮಗಳು ಸಿನಿಮಾದಿಂದ ಅರ್ಧಕ್ಕೆ ಎದ್ದು ಹೊರಬಂದಿದ್ದಾಗಿ ತಿಳಿಸಿದರು. ಇಡೀ ಸಿನಿಮಾದಲ್ಲಿ ಹಿಂಸೆ, ನಗ್ನತೆ, ಅಸಭ್ಯತೆಯೇ ಪ್ರಧಾನವಾಗಿದೆ ಎಂದು ದೂರಿದರು ಮತ್ತು ಕ್ರಮಕ್ಕೂ ಆಗ್ರಹಿಸಿದರು.

    ಹಿಂಸೆಯೇ ಪ್ರಧಾನ
    ಕಬಿರ್​ ಸಿಂಗ್​, ಪುಷ್ಪ, ಕೆಜಿಎಫ್​ 2 ಸೇರಿದಂತೆ ಇತ್ತೀಚಿನ ಸಿನಿಮಾಗಳಲ್ಲಿ ಹಿಂಸೆಯನ್ನೇ ಕೇಂದ್ರಿಕರಿಸಲಾಗಿದೆ. ಕೆಲ ಸಿನಿಮಾಗಳಲ್ಲಿ ನಗ್ನತೆಯು ಇದೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ ಸನ್ನಿವೇಶಗಳೇ ಚಿತ್ರದ ಪ್ರಧಾನ ಕತೆಯಾಗಿದೆ. ಕೆಜಿಎಫ್​-2 ಸಿನಿಮಾ ನೋಡಿ ಅದೇ ಮಾದರಿಯಲ್ಲಿ ಮಧ್ಯಪ್ರದೇಶದ ಯುವಕನೊಬ್ಬ ಸುತ್ತಿಗೆಯಿಂದ ನಾಲ್ವರನ್ನು ಕೊಂದಿರುವ ಉದಾಹರಣೆ ಇದೆ. ಪುಷ್ಪ ಸಿನಿಮಾದಿಂದ ಸ್ಫೂರ್ತಿಗೊಂಡು ಅದೇ ಮಾದರಿಯಲ್ಲಿ ರಕ್ತಚಂದನ ಸಾಗಾಣೆಯಲ್ಲಿ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಕೆಜಿಎಫ್​ ಸಿನಿಮಾದಲ್ಲಿ ನಟ ಯಶ್​ ಸಿಗರೇಟ್​ ಸೇದುವ ಶೈಲಿಯಿಂದ ಪ್ರಭಾವಿತನಾದ ಹುಡುಗನೊಬ್ಬ ಒಂದು ಪ್ಯಾಕ್​ ಸಿಗರೇಟ್​ ಸೇದಿ ಆಸ್ಪತ್ರೆಗೆ ಸೇರಿದ್ದ. ಸಮಾಜದಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿರುವ ಸಿನಿಮಾಗಳಿಗೆ ಕಡಿವಾಣ ಬೀಳಬೇಕಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಸದನದಲ್ಲೇ ಸಂಸದೆಯೊಬ್ಬರು ಧ್ವನಿ ಎತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಿಂಸೆಯನ್ನು ವೈಭವೀಕರಿಸುವ ಸಿನಿಮಾಗಳಲ್ಲಿ ಕಡಿವಾಣ ಬೀಳುವ ಭರವಸೆ ಇದೆ. ರಂಜೀತ್​ ರಂಜನ್​ರಂತೆ ಅನೇಕ ಧ್ವನಿ ಎತ್ತಿದರೆ ಇಂತಹ ಚಿತ್ರಗಳಿಗೆ ಕಡಿವಾಣ ಗ್ಯಾರೆಂಟಿ ಬೀಳಲಿದೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಡಿಸೆಂಬರ್​ 1ರಂದು ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 500 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್​ ಸಿನಿಮಾ ಕಮಾಲ್​ ಮಾಡುತ್ತಿದೆ. (ಏಜೆನ್ಸೀಸ್​)

    ಅನಿಮಲ್ ಸಿನಿಮಾ​ ವಿವಾದ: ಹಿಂಸೆಯನ್ನೇ ವೈಭವೀಕರಿಸುವ ಚಿತ್ರಗಳಿಗೆ ಬೀಳಲಿದೆಯಾ ಕಡಿವಾಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts