ಮುಂಬೈ: ಇತ್ತೀಚಿನ ದಿನಗಳಲ್ಲಿ ಇಡಿ ಅಧಿಕಾರಿಗಳು ಬೇರೆಬೇರೆ ಕೇಸ್ಗಳಲ್ಲಿ ಬಾಲಿವುಡ್ನ ಸಾಕಷ್ಟು ಮಂದಿ ಸೆಲೆಬ್ರಿಟಿಗಳನ್ನು ಗ್ರಿಲ್ ಮಾಡಿದ್ದಾರೆ. ಈಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಸಹ ಇಡಿ ಅಧಿಕಾರಿಗಳಿಂದ ಗ್ರಿಲ್ ಮಾಡಿಸಿಕೊಂಡಿದ್ದಾರೆ. ಬುಧವಾರ ರಾತ್ರಿಯಿಂದ ಸತತವಾಗಿ 12 ಗಂಟೆಗಳ ಕಾಲ ವಿಜಯ್ ದೇವರಕೊಂಡ ಅವರನ್ನು ಗ್ರಿಲ್ ಮಾಡಿರುವ ಇಡಿ ಅಧಿಕಾರಿಗಳು, ಇಂದು ಬೆಳಿಗ್ಗೆ ಬಿಟ್ಟು ಕಳಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಅಭಿಷೇಕ್ ಮದ್ವೆ ಫಿಕ್ಸ್ ಎನ್ನುತ್ತಿವೆ ಆಪ್ತ ಮೂಲಗಳು: ಇವರೇ ನೋಡಿ ಅಭಿ ಮನಸ್ಸು ಗೆದ್ದ ಚೆಲುವೆ!?
ಇಷ್ಟಕ್ಕೂ ವಿಜಯ್ ದೇವರಕೊಂಡ ಅವರನ್ನು ಯಾಕೆ ವಿಚಾರಣೆ ನಡೆಸಲಾಯಿತು ಎಂಬ ಪ್ರಶ್ನೆ ಬರುವುದು ಸಹಜ. ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಎಂಬ ಪ್ಯಾನ್ ಇಂಡಿಯಾ ಚಿತ್ರವು ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸೋಲು ಅನುಭವಿಸಿತ್ತು. ಆ ನಂತರ ನಿರ್ದೇಶಕ ಕಂ ನಿರ್ಮಾಪಕ ಪುರಿ ಜಗನ್ನಾಥ್ ಅವರಿಗೂ, ಕೆಲವು ವಿತರಕರ ನಡುವೆ ಹಣಕಾಸಿನ ವಿಷಯವಾಗಿ ಗಲಾಟೆ ನಡೆದಿತ್ತು. ಚಿತ್ರಕ್ಕೆ ವಿದೇಶಿ ಮೂಲಗಳಿಂದ ಹಣ ಹೂಡಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ವಿಜಯ್ ದೇವರಕೊಂಡ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ವಿಜಯ್ ದೇವರಕೊಂಡ, 'ಇವೆಲ್ಲವೂ ಜನಪ್ರಿಯತೆಯ ಸೈಡ್ ಎಫೆಕ್ಟ್ಗಳು. ಜನಪ್ರಿಯವಾಗುತ್ತಿದ್ದಂತೆಯೇ ಕೆಲವೊಮ್ಮೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಜೀವನ ಅಂದ ಮೇಲೆ ಇವೆಲ್ಲ ಇದ್ದಿದ್ದೇ. ಅಧಿಕಾರಿಗಳು ಕರೆದಾಗ ಬರುವುದು ಮತ್ತು ಅವರ ಪ್ರಶ್ನೆಗೆ ಉತ್ತರಿಸಬೇಕಾದ ಕರ್ತವ್ಯ ನನ್ನದಾಗಿತ್ತು. ಆ ಕರ್ತವ್ಯವನ್ನು ನಿರ್ವಹಿಸಿದ್ದೇನೆ' ಎಂದು ವಿಜಯ್ ಹೇಳಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಅಲ್ಲದೆ, 'ಲೈಗರ್' ಚಿತ್ರದ ಸಹನಿರ್ಮಾಪಕಿಯಾದ ಚಾರ್ಮಿ ಕೌರ್ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.