ಸಿನಿವಾಣಿ

ಸ್ಪರ್ಧೆಯಿಂದ ಹಿಂದೆ ಸರಿದ 'ವಾರಸುಡು'; 14ಕ್ಕೆ ಬಿಡುಗಡೆ

chetannadiger

ಚೆನ್ನೈ: ಈ ಬಾರಿಯ ಸಂಕ್ರಾಂತಿಗೆ ಟಾಲಿವುಡ್​ನಲ್ಲಿ ದೊಡ್ಡ ಕ್ಲಾಶ್​ ಎದುರಾಗಿತ್ತು. ಅಜಿತ್​ ಅಭಿನಯದ 'ತುನಿವು', ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ', ನಂದಮೂರಿ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಮತ್ತು ವಿಜಯ್​ ಅಭಿನಯದ 'ವಾರಿಸುಡು' ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಅದರಲ್ಲೂ 'ತುನಿವು' ಮತ್ತು 'ವಾರಸುಡು' ಚಿತ್ರಗಳು ಒಂದೇ ದಿನ ಅಂದರೆ ಜನವರಿ 11ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಈಗ 'ವಾರಸುಡು' ಚಿತ್ರಗಳು ಮುಂದಕ್ಕೆ ಹೋಗಿದ್ದು, 14ಕ್ಕೆ ಬಿಡುಗಡೆಯಾಗುತ್ತಿದೆ.

ಕಾಲಿವುಡ್​ನಲ್ಲಿ ಅಜಿತ್​ ಮತ್ತು ವಿಜಯ್​ ಚಿತ್ರಗಳ ಪೈಪೋಟಿ ಹೊಸದೇನಲ್ಲ. ಸುಮಾರು ಎಂಟು ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ, ವಿಜಯ್​ ಅಭಿನಯದ 'ಜಿಲ್ಲಾ' ಮತ್ತು ಅಜಿತ್​ ಅಭಿನಯದ 'ವೀರಂ' ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ, 'ವೀರಂ' ಚಿತ್ರವು ಸೂಪರ್​ ಹಿಟ್​ ಆಗಿತ್ತು. ಈಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ವಿಜಯ್​ ಅಭಿನಯದ 'ವಾರಿಸು' ಮತ್ತು ಅಜಿತ್​ ಅಭಿನಯದ 'ತುನಿವು' ಚಿತ್ರಗಳು ಜನವರಿ 11ರಂದು ಪೈಪೋಟಿ ನಡೆಸಲಿವೆ.

ಇನ್ನು, ಈ ಎರಡೂ ಚಿತ್ರಗಳು ತೆಲುಗಿಗೆ ಡಬ್​ ಆಗಿ ಅದೇ ದಿನ ಬಿಡುಗಡೆ ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಆ ಸ್ಪರ್ಧೆಯಿಂದ 'ವಾರಸುಡು' ('ವಾರಿಸು' ಚಿತ್ರದ ತೆಲುಗು ಅವತರಣಿಕೆ) ಹಿಂದೆ ಸರಿದಿದೆ. 'ತುನಿವು' ಬಿಡುಗಡೆಯಾಗಿ ಎರಡು ದಿನಗಳ ನಂತರ ಬಿಡುಗಡೆಯಾಗಲಿದೆ. ಹಾಗಂತ 'ತುನಿವು' ಭಯದಿಂದ ಹಿಂದೆ ಸರಿಯಿತು ಎಂದರ್ಥವಲ್ಲ. 'ವಾರಿಸು' ಮುಂದೂಡಲ್ಪಡುವುದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, 'ತುನಿವು' ಚಿತ್ರವು 11ಕ್ಕೆ ಬಿಡುಗಡೆಯಾದರೆ, ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ' 12ಕ್ಕೆ ಬಿಡುಗಡೆಯಾಗಲಿದೆ, ನಂದಮೂರಿ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಚಿತ್ರವು 13ಕ್ಕೆ ಬಿಡುಗಡೆಯಾಗಲಿದೆ. ಮೂರು ದೊಡ್ಡ ಚಿತ್ರಗಳು ಬಿಡುಗಡೆಯಾದರೆ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ನಿರ್ಮಾಪಕ ದಿಲ್​ ರಾಜು ಚಿತ್ರವನ್ನು ಮುಂದಕ್ಕೆ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ತಮಿಳು ಅವತರಣಿಕೆಯು ಅಂದುಕೊಂಡಂತೆ 11ಕ್ಕೆ ಬಿಡುಗಡೆಯಾಗಲಿದೆ. ತೆಲುಗು ಅವತರಣಿಕೆಯನ್ನು ಮಾತ್ರ ಎರಡು ದಿನ ಮುಂದೂಡಿದ್ದೇವೆ. ಚಿರಂಜೀವಿ, ಬಾಲಕೃಷ್ಣ ಮುಂತಾದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಮುಂದೂಡಲಾಗಿದೆ. ಈ ಚಿತ್ರ ಸೂಪರ್​ ಹಿಟ್​ ಆಗುತ್ತದೆ ಎಂಬ ನಂಬಿಕೆ ನನಗಿದೆ. ಮೊದಲು ತೆಲುಗಿನ ಸ್ಟಾರ್​ ನಟರ ಚಿತ್ರಗಳು ಬಿಡುಗಡೆಯಾಗಬೇಕು ಮತ್ತು ಆ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗಬೇಕು. ಆ ನಂತರ ಡಬ್ಬಿಂಗ್​ ಚಿತ್ರಗಳಿಗೆ ಮಾನ್ಯತೆ' ಎಂದು ಅವರು ಹೇಳಿದ್ದಾರೆ.