

ಹೈದರಾಬಾದ್: ಟಾಲಿವುಡ್ನ ಬಿಜಿ ನಟಿಯರ ಪೈಕಿ ನ್ನಡತಿ ರಶ್ಮಿಕಾ ಮಂದಣ್ಣ ಸಹ ಒಬ್ಬರು. ಸದ್ಯ 'ಪುಷ್ಪ 2' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅವರು, ಜನರಿಂದ ಪ್ರೀತಿ ಪಡೆಯುವುದರ ಜತೆಗೆ ಸಾಕಷ್ಟು ಟೀಕೆಗೂ ಒಳಗಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನೂ ತೋಡಿಕೊಂಡಿದ್ದಾರೆ.
ಈಗ ಈ ಕುರಿತು ಸಮಾರಂಭವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಜನರ ಪ್ರೀತಿ, ಟೀಕೆಗಳ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಟೀಕೆಗಳ ನಡುವೆಯೂ ಜನರ ಪ್ರೀತಿ ತಮ್ಮನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ನಾವು ಕಲಾವಿದರು. ಎಲ್ಲರೂ ನಮ್ಮನ್ನು ಪ್ರೀತಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಒಳ್ಳೆಯ ಮಾತುಗಳನ್ನುಕೇಳುವುದರ ಜತೆಗೆ ಕೆಲವೊಮ್ಮೆ ಟೀಕೆಗಳನ್ನು ಸಹ ಎದುರಿಬೇಕಾಗುತ್ತದೆ. ನಾವು ಪಬ್ಲಿಕ್ ಫಿಗರ್ಗಳಾಗಿರುವುದರಿಂದ ಇವೆಲ್ಲವೂ ಸರ್ವೇಸಾಮಾನ್ಯ. ಜನ ನಮ್ಮನ್ನು ಹಲವು ಕಾರಣಗಳಿಗಾಗಿ ಟೀಕಿಸಬಹುದು. ಆದರೆ, ಅದರ ನಡುವೆಯೂ ಸಾಕಷ್ಟು ಪ್ರೀತಿ ಸಿಗುತ್ತಿದೆ. ಜನ ಬಹಳ ಪ್ರೀತಿಯಿಂದ ಗುರುತಿಸಿ ಮಾತನಾಡಿದಾಗ ಖುಷಿಯಾಗುತ್ತದೆ. ಈ ಖುಷಿಯ ನಡುವೆ, ದ್ವೇಷ ಮತ್ತು ಟೀಕೆಗಳೆಲ್ಲ ಮರೆತು ಹೋಗುತ್ತದೆ' ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಇನ್ನು, ಇತ್ತೀಚೆಗಷ್ಟೇ ಹೊಸ ವರ್ಷವನ್ನು ಗೆಳೆಯ ವಿಜಯ್ ದೇವರಕೊಂಡ ಜತೆಗೆ ಆಚರಿಸಿರುವ ರಶ್ಮಿಕಾ, ಭಾರತಕ್ಕೆ ವಾಪಸ್ಸಾಗಿದ್ದು, ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.