ಸಿನಿವಾಣಿ

ಯಾವುದೇ ಪದವಿ ಕೊಡಲಿಲ್ಲ, ಹಣವನ್ನೂ ನೀಡಲಿಲ್ಲ; ಆದರೂ ಮಾಡುತ್ತಿದ್ದಾರೆ ಸ್ವಯಂಪ್ರಚಾರ: ಬೆಂಬಲಿಸಿದವರಿಗೆ ಉಪೇಂದ್ರ ಮೆಚ್ಚುಗೆ

ಬೆಂಗಳೂರು: ಹದಗೆಟ್ಟಿರುವ ವ್ಯವಸ್ಥೆಯನ್ನೇ ಸಂಪೂರ್ಣ ಬದಲಿಸುವ ಉದ್ದೇಶದಿಂದ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಾಕಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಅಬ್ಬರದ ಪ್ರಚಾರದಿಂದ ದೂರವಿದ್ದರೂ ಸದ್ದಿಲ್ಲದೆ ತನ್ನ ವಿಚಾರದ ಪ್ರಚಾರವನ್ನು ನಾಲ್ಕು ವರ್ಷಗಳಿಂದ ಮಾಡುತ್ತಲೇ ಬಂದಿದೆ.

ತಮ್ಮ ಕನಸಿಗೆ ಕೈಜೋಡಿಸುತ್ತಿರುವ ಸಾರ್ವಜನಿಕರಿಗೆ ಆಗಾಗ ಸ್ಪಂದಿಸುವ ಮೂಲಕ ಅವರನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಪಕ್ಷದ ಸಂಸ್ಥಾಪಕ ಉಪೇಂದ್ರ ಮಾಡುತ್ತ ಬಂದಿದ್ದಾರೆ. ಹಣ ಹೂಡದ, ಕಾರ್ಯಕರ್ತರಿರದ ಪಕ್ಷವನ್ನು ಕಟ್ಟಿರುವ ಅವರು, ವಿಚಾರವೇ ಮುಖ್ಯವಾಗಬೇಕು ಎಂಬ ಧ್ಯೇಯದೊಂದಿಗೆ ಪಕ್ಷವನ್ನು ನಡೆಸುತ್ತಿದ್ದಾರೆ.

ತಮ್ಮ ಆಲೋಚನೆಯಂತೆಯೇ ಸ್ಪಂದಿಸುತ್ತಿರುವ ಸಾರ್ವಜನಿಕರು ಪ್ರಜಾಕೀಯ ಚಿಂತನೆಯ ಪ್ರಚಾರವನ್ನು ಮಾಡುತ್ತಿರುವ ಕುರಿತು ಉಪೇಂದ್ರ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಯಾವುದೇ ಪದವಿ ಕೊಡದಿದ್ದರೂ, ಪಾರ್ಟಿಯಿಂದ ಯಾವುದೇ ರೀತಿಯಲ್ಲಿ ಹಣ ನೀಡದಿದ್ದರೂ ಹಲವಾರು ಮಂದಿ ಸ್ವಯಂಪ್ರೇರಿತರಾಗಿ ವಿಚಾರವನ್ನು ಪ್ರಚಾರ ಮಾಡುತ್ತಿರುವ ಕುರಿತು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಂಥ ಕೆಲವು ಪೋಸ್ಟ್​ಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, 'ಸ್ವಾತಂತ್ರ್ಯ ಸಿಕ್ಕಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಮತ್ತೆ ಬಲಿಷ್ಠರು ಬೀಸುವ ಬೇರೆ ಬೇರೆ ಕ್ಷುಲ್ಲಕ ಕಾರಣಕ್ಕೆ ಮಾರಿಕೊಂಡು ಭ್ರಷ್ಟ ವ್ಯವಸ್ಥೆಯಲ್ಲಿ ಮತ್ತೆ ಅತಂತ್ರರಾಗಿರುವ ನಮ್ಮನ್ನು ಪ್ರಜಾಕೀಯ ವಿಚಾರಗಳಿಂದ ಎಚ್ಚರಿಸಲು ರಾಜಕೀಯದಿಂದ ಸ್ವತಂತ್ರ ತರಲು ನಿಸ್ವಾರ್ಥ ವೀರರ ಪಡೆ ರಾಜ್ಯದ ಮೂಲೆ ಮೂಲೆಯಲ್ಲಿ ಉದಯಿಸುತ್ತಿದೆ' ಎಂದು ಅವರು ಹೇಳಿಕೊಂಡಿದ್ದಾರೆ.