ಸಿನಿವಾಣಿ

'ಕಮಾನ್ ಕಮಾನ್..' ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ 'ಕಾಮಣ್ಣ'! ; ಅನಂತನ ಅವಾಂತರ ಮತ್ತು ಆ ಅವತಾರ...

Webdesk - Ravikanth

ಬೆಂಗಳೂರು: ನಟ-ನಿರ್ದೇಶಕ ರಿಯಲ್​ ಸ್ಟಾರ್ ಉಪೇಂದ್ರಗೆ 'ಕಮಾನ್​ ಕಮಾನ್' ಎಂದು 'ಕಾಮಣ್ಣ' ನೆನಪಿನ ಬಾಣ ಬಿಟ್ಟಿದ್ದಾನೆ. ಅರ್ಥಾತ್​, ಅವರು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ 'ಅನಂತನ ಅವಾಂತರ' ಸಿನಿಮಾದ ಹಾಡಿನ ದೃಶ್ಯದ 'ಕಾಮಣ್ಣ' ಇದೀಗ ಅವರಿಗೆ ನೆನಪಾಗಿದ್ದಾನೆ.

ಕಾಶಿನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಅನಂತನ ಅವಾಂತರ' ಸಿನಿಮಾ 1989ರಂದು ಇದೇ ದಿನ ಅಂದರೆ ಜನವರಿ 5ರಂದು ತೆರೆಕಂಡಿತ್ತು. ಕಾಶಿನಾಥ್​ ನಿರ್ದೇಶನದ ಜತೆಗೆ ಅಭಿನಯವನ್ನೂ ಮಾಡಿರುವ ಈ ಚಿತ್ರದಲ್ಲಿ ಅಂಜಲಿ, ಅರವಿಂದ್, ದಿನೇಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು.

ಈ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸುವ ಜತೆಗೆ ಸಾಹಿತ್ಯವನ್ನೂ ರಚಿಸಿದ್ದರು. ಅವರೊಂದಿಗೆ ವಿ.ಮನೋಹರ್ ಹಾಗೂ ಉಪೇಂದ್ರ ಕೂಡ ಸಾಹಿತ್ಯ ಬರೆದಿದ್ದರು. ಆ ಪೈಕಿ 'ಕಮಾನ್​ ಕಮಾನ್ ಕಾಮಣ್ಣ..' ಗೀತೆಯ ಸಾಹಿತ್ಯ ಉಪೇಂದ್ರ ಅವರದ್ದು.

ಈ ಹಾಡಿನ ದೃಶ್ಯದಲ್ಲಿ ಕಾಮಣ್ಣ ಅಂದರೆ ಮನ್ಮಥನಾಗಿ ಯಾರು ಅಭಿನಯಿಸುವುದು ಎಂಬ ಯೋಚನೆಯಲ್ಲಿದ್ದಾಗ ಕಾಶಿನಾಥ್​ ಅವರು, ಹಾಡಿನ ಸಾಹಿತ್ಯ ಬರೆದಿದ್ದ ಉಪ್ಪಿಗೇ ಕಾಮಣ್ಣನಾಗುವಂತೆ ಸೂಚಿಸಿದ್ದರು. ಹೀಗಾಗಿ ಆ ಚಿತ್ರದಲ್ಲಿ ಆಧುನಿಕ ಮನ್ಮಥನಾಗಿ ಉಪೇಂದ್ರ ಕಾಣಿಸಿಕೊಂಡಿದ್ದರು.

ಹೀಗೆ 33 ವರ್ಷಗಳ ಹಿಂದೆ ತಾವು ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದ ನೆನಪನ್ನು ಸ್ವತಃ ಉಪೇಂದ್ರ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕಾಮಣ್ಣನಾಗಿ ಕಾಣಿಸಿಕೊಂಡ ಫೋಟೋ ಜತೆ, ತಮ್ಮ ಗುರು ಕಾಶಿನಾಥ್ ಅವರರೊಂದಿಗೆ ಇರುವ ಫೋಟೋ ಕೂಡ ಪೋಸ್ಟ್ ಮಾಡಿಕೊಳ್ಳುವ ಮೂಲಕ ಅಂದಿನ ಅನಂತನ ಅವಾಂತರದಲ್ಲಿನ ತಮ್ಮ ಮನ್ಮಥನ ಅವತಾರವನ್ನು ಉಪ್ಪಿ ಸ್ಮರಿಸಿಕೊಂಡಿದ್ದಾರೆ.