ಸಿನಿವಾಣಿ

ಯುಐ ಟೀಸರ್‌ಗೆ ಮುಹೂರ್ತ ; ಅಭಿಮಾನಿಗಳ ಒತ್ತಾಯಕ್ಕೆ ಕೊನೆಗೂ ಮಣಿದ ಉಪೇಂದ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ಯುಐ’. ರಿಯಲ್ ಸ್ಟಾರ್ ‘ಉಪ್ಪಿ 2’ ಚಿತ್ರದ ಬಳಿಕ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಿಸುತ್ತಿರುವ ಕಾರಣ ‘ಯುಐ’ ಬಗ್ಗೆ ಪ್ರಾರಂಭದಿಂದಲೂ ಕುತೂಹಲವಿದೆ. ಇನ್ನು ವಿಭಿನ್ನವಾದ ಶೀರ್ಷಿಕೆ, ಪೋಸ್ಟರ್‌ಗಳು ಮೊದಲಿನಿಂದಲೂ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿವೆ. ಇಂತಹ ‘ಯುಐ’ ಟೀಸರ್ ಯಾವಾಗ ರಿಲೀಸ್? ಟ್ರೇಲರ್ ಬಿಡುಗಡೆ ಎಂದು? ಅಂತೆಲ್ಲ ಹಲವು ತಿಂಗಳಿನಿಂದ ಅಭಿಮಾನಿಗಳು ಉಪೇಂದ್ರ ಸೇರಿ ಚಿತ್ರತಂಡವನ್ನು ಪ್ರಶ್ನಿಸುತ್ತಿದ್ದರು.

ಅದಕ್ಕೆ ‘ಎರಡು ತಾಸಿನ ಸಿನಿಮಾನ ಎರಡು ನಿಮಿಷಗಳಲ್ಲಿ ಹೇಗೆ ತೋರಿಸುವುದು?‘ ಎಂದು ಉಪೇಂದ್ರ ಸಹ ತಲೆಗೆ ಹುಳಬಿಟ್ಟಿದ್ದರು. ಇದೀಗ ಕೊನೆಗೂ ಉಪೇಂದ್ರ ಅಭಿಮಾನಿಗಳ ಒತ್ತಾಯಕ್ಕೆ ಮಣಿದಿದ್ದಾರೆ. ಟೀಸರ್ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಹೌದು, ಸೆ.18ರಂದು ‘ಯುಐ’ ಟೀಸರ್ ರಿಲೀಸ್ ಮಾಡುವುದಾಗಿ ಉಪೇಂದ್ರ ಹೇಳಿಕೊಂಡಿದ್ದರು. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ಅವರು, ‘ಇದೇ ಸೆ. 18, ಅಭಿಮಾನಿಗಳ ಹಬ್ಬದ ದಿನ, ಊರ್ವಶಿ ಥಿಯೇಟರ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ‘ಯುಐ’ ಚಿತ್ರದ ಟೀಸರ್ ನೋಡಲಿದ್ದೀರಿ’ ಎಂದು ಭರವಸೆ ನೀಡಿದ್ದಾರೆ.

ಟೀಸರ್ ರಿಲೀಸ್ ಬಗ್ಗೆಯೂ ಹಲವು ದಿನಗಳಿಂದ ಕುತೂಹಲ ಕಾಯ್ದುಕೊಂಡಿರುವ ಕಾರಣ, ಅಭಿಮಾನಿಗಳು ಸೆ. 18ಕ್ಕೆ ಎದುರು ನೋಡುತ್ತಿದ್ದಾರೆ.