

ಬೆಂಗಳೂರು: ಶರಣ್, ಅದಿತಿ ಪ್ರಭುದೇವ ನಟಿಸುತ್ತಿರುವ ‘ಕರ್ವ’ ಖ್ಯಾತಿಯ ನಿರ್ದೇಶಕ ನವನೀತ್ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಛೂ ಮಂತರ್’. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದೀಗ ಚಿತ್ರದ ಶೀರ್ಷಿಕೆ ಗೀತೆಯನ್ನು ಅನಾವರಣ ಮಾಡಲಾಗಿದೆ.
ವಿಜಯ್ ಸಾಹಿತ್ಯ ಬರೆದಿರುವ, ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿ ಹಾಡಿರುವ ಈ ಹಾಡನ್ನು ರವಿಚಂದ್ರನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಗೀತೆಯ ಬಗ್ಗೆ ಚಂದನ್ ಶೆಟ್ಟಿ, ‘ಈ ಹಾಡು ಬೇಕೋ, ಬೇಡವೋ ಎನ್ನುವುದರ ಬಗ್ಗೆಯೇ ಸಾಕಷ್ಟು ಚರ್ಚೆಯಾಗಿತ್ತು. ನಂತರ ಹಾಡು ಮಾಡುವುದಾಗಿ ತೀರ್ಮಾನಿಸಿದಾಗ ಭಯವೂ ಆಗಬೇಕು, ಡಾನ್ಸ್ ಕೂಡ ಮಾಡಬೇಕು ಅಂತಹ ಸಾಂಗ್ ಮಾಡುವುದು ಚಾಲೆಂಜಿಂಗ್ ಆಗಿತ್ತು’ ಎಂದು ಮಾಹಿತಿ ನೀಡಿದರು. ಚಿತ್ರದ ನಾಯಕ ಶರಣ್, ‘ಡಾನ್ಸ್ ಮಾಡಿ ನಾನು ಸುಮಾರು ಮೂರು ವರ್ಷ ಆಗಿತ್ತು. ಈಗ ಈ ಹಾಡಿಗೆ ಹೆಜ್ಜೆ ಹಾಕಿಸಿದ್ದಾರೆ’ ಎಂದು ಹೇಳಿಕೊಂಡರು. ಶರಣ್ ಜತೆ ಹೆಜ್ಜೆ ಹಾಕಿರುವ ಅದಿತಿ ಪ್ರಭುದೇವ, ‘ಆಕಾಂಕ್ಷ ಎನ್ನುವ ಪಾತ್ರ. ಈ ಚಿತ್ರದಲ್ಲಿ ನಮಗೆಲ್ಲ ಒಳ್ಳೊಳ್ಳೆ ಸಾಹಸಮಯ ಪಾತ್ರಗಳಿವೆ’ ಎಂದರು.
‘ಕ್ಯಾತ್ರಿನ್’ ಎಂಬ ವಿಭಿನ್ನ ಪಾತ್ರದಲ್ಲಿ ಮೇಘನಾ ಗಾಂವ್ಕರ್ ಅಭಿನಯಿಸುತ್ತಿದ್ದಾರಂತೆ. ಜತೆಗೆ ಚಿಕ್ಕಣ್ಣ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಅನೂಪ್ ಛಾಯಾಗ್ರಹಣ, ಅವಿನಾಶ್ ಹಿನ್ನೆಲೆ ಸಂಗೀತ, ರವಿವರ್ಮ ಸಾಹಸ ನಿರ್ದೇಶನವಿರಲಿದೆ.