ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಕಲಾವಿದರಾದ ಸಿಂಬು, ಧನುಷ್, ಎಸ್.ಜೆ. ಸೂರ್ಯ ಮತ್ತು ಅಮಲಾ ಪೌಲ್ ಸೇರಿದಂತೆ 14 ಕಲಾವಿದರ ವಿರುದ್ಧ ಕಾಲಿವುಡ್ ನಿರ್ಮಾಪಕರ ಸಂಘ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.
ಭಾರತೀಯ ಸಿನಿ ರಂಗದಲ್ಲಿ ತಮಿಳು ಚಿತ್ರರಂಗಕ್ಕೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ. ಬಹುಕೋಟಿ ವ್ಯವಹಾರ ನಡೆಸುವ ಕಾಲಿವುಡ್ ಸಿನಿಮಾಗಳಲ್ಲಿ ನಟಿಸುವ ನಟ-ನಟಿಯರು ಕೂಡ ವಿಶ್ವಾದ್ಯಂತ ಫೇಮಸ್ ಆಗಿದ್ದಾರೆ. ಇಂದು ಸಿನಿಮಾಗಳಿಗೆ ಯಾವುದೇ ಗಡಿಗಳು ಇಲ್ಲ. ಎಲ್ಲ ಸಿನಿರಂಗ ಮಾರುಕಟ್ಟೆ ವಿಸ್ತರಣೆಯಾಗಿದ್ದು, ತಮಿಳು ಮಾತ್ರವಲ್ಲದೆ, ಬೇರೆ ಭಾಷೆಯ ಸಿನಿಮಾಗಳಲ್ಲೂ ನಟ-ನಟಿಯರು ನಟಿಸುವುದರಿಂದ ಸಹಜವಾಗಿ ಸಂಬಳ, ಕಾಲ್ಶೀಟ್ ಸೇರಿದಂತೆ ಕೆಲವೊಂದಿಷ್ಟು ಸಮಸ್ಯೆಗಳು ಕಲಾವಿದರು ಮತ್ತು ನಿರ್ಮಾಪಕರ ನಡುವೆ ಎದುರಾಗುತ್ತವೆ.
ತಮಿಳು ಸಿನಿ ರಂಗದಲ್ಲೂ ಇದೇ ಸಮಸ್ಯೆ ಎದುರಾಗಿದ್ದು, ಈ ವಿಚಾರವಾಗಿ ನಿರ್ಮಾಪಕರ ಸಂಘದ ವತಿಯಿಂದ ನಿನ್ನೆ ಸಭೆ ನಡೆಸಲಾಗಿದೆ. ಇದರಲ್ಲಿ ಕಲಾವಿದರ ಸಂಘದ ಪದಾಧಿಕಾರಿಗಳೂ ಸಹ ಭಾಗವಹಿಸಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯ ಸಾಮಾನ್ಯ ಸಮಿತಿ (ಟಿಎಫ್ಪಿಸಿ) ಅಧ್ಯಕ್ಷ ತೇನಾಂಡಾಳ್ ಫಿಲಂಸ್ ಮುರಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುಂಗಡ ಹಣ ಪಡೆದು ಕಾಲ್ಶೀಟ್ ಕೊಡದ ಕಲಾವಿದರಿಗೆ ರೆಡ್ ಕಾರ್ಡ್ ಹಾಕುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಆ ಕಲಾವಿದರು ಯಾರು ಎನ್ನುವುದನ್ನು ನೋಡುವುದಾದರೆ, ಖ್ಯಾತ ನಟರಾದ ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಯೋಗಿ ಬಾಬು, ಅಥರ್ವ, ವಿಜಯ್ ಸೇತುಪತಿ, ಧನುಷ್ ಹಾಗೂ ನಟಿಯರಾದ ಅಮಲಾ ಪೌಲ್ ಮತ್ತು ಲಕ್ಷ್ಮಿ ರೈ ಹೆಸರು ಕೇಳಿಬಂದಿದೆ.
ಈ ಪಟ್ಟಿಯಲ್ಲಿ 14 ಮಂದಿ ಕಲಾವಿದರಿದ್ದು, ಅವರನ್ನು ವಿವರಣೆ ಕೇಳಿ ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಇದಲ್ಲದೇ ನಟ-ನಟಿಯರು ನೇಮಿಸುವ ಸಹಾಯಕರು ಹಾಗೂ ಬೌನ್ಸರ್ಗಳಿಗೆ ನಿರ್ಮಾಪಕರು ಇನ್ನು ಮುಂದೆ ಸಂಭಾವನೆ ನೀಡುವುದಿಲ್ಲ ಎಂದು ನಿರ್ಧರಿಸಲಾಗಿದೆ. ನಟ-ನಟಿಯರು ತಮ್ಮ ಸಹಾಯಕರಿಗೆ ತಾವೇ ಸಂಬಳ ನೀಡಬೇಕು ಎಂಬ ನಿರ್ಣಯವನ್ನು ನಿರ್ಮಾಪಕ ಸಂಘ ಅಂಗೀಕರಿಸಿದೆ.
ಮೇಕಪ್ ಮ್ಯಾನ್ ವಿಷಯದಲ್ಲೂ, ಅವರು ಸಂಘದ ಸದಸ್ಯರಾಗಿದ್ದರೆ ಮಾತ್ರ ಅವರಿಗೆ ಹಣ ಪಾವತಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸದಸ್ಯರಲ್ಲದವರಿಗೆ ನಟ-ನಟಿಯರೇ ಎಲ್ಲ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕು. ಇವುಗಳ ಜತೆಗೆ ವೇತನ ವಿಚಾರದಲ್ಲೂ ಮಹತ್ವದ ನಿರ್ಧಾರ ಕೈಗೊಂಡಿರುವಂತಿದೆ. ವರದಿಗಳ ಪ್ರಕಾರ, ಮೊದಲು ಶೇ. 10 ರಷ್ಟು ಹಣವನ್ನು ಮುಂಗಡವಾಗಿ, 60ರಷ್ಟು ಸಂಬಳವನ್ನು ಡಬ್ಬಿಂಗ್ ವೇಳೆ ಮತ್ತು ಉಳಿದ ಶೇ. 30 ರಷ್ಟು ಹಣವನ್ನು ಸಿನಿಮಾ ಬಿಡುಗಡೆ ವೇಳೆ ನೀಡಲು ಸಂಘ ತೀರ್ಮಾನಿಸಿದೆ ಎನ್ನಲಾಗಿದೆ.
ತೇನಾಂಡಾಲ್ ಸ್ಟುಡಿಯೋಸ್ ಮುಖ್ಯಸ್ಥ ಮುರಳಿ ರಾಮಸಾಮಿ ಅವರು ಧನುಷ್ ವಿರುದ್ಧ ಆರೋಪ ಮಾಡಿದ್ದು, ತಮ್ಮ ನಿರ್ದೇಶನದ ಚಿತ್ರದಿಂದ ಹೊರನಡೆದಿದ್ದಾರೆ ಮತ್ತು ಚಲನಚಿತ್ರವನ್ನು ಪೂರ್ಣಗೊಳಿಸಲು ಧನುಷ್ರನ್ನು ಒತ್ತಾಯಿಸಲು ಮಂಡಳಿಯ ಸಹಾಯವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ನಟಿಯರಾದ ಅಮಲಾ ಪೌಲ್ ಮತ್ತು ಲಕ್ಷ್ಮಿ ರೈ ಅವರು ಶೂಟಿಂಗ್ ಸಮಯದಲ್ಲಿ ತಮ್ಮ ರಕ್ಷಣೆಗಾಗಿ ಹತ್ತು ಮಂದಿ ಬಾಡಿಗಾರ್ಡ್‌ಗಳನ್ನು ನೇಮಿಸಿಕೊಳ್ಳುತ್ತಿದ್ದು, ಇದರ ಹೊರೆ ನಿರ್ಮಾಪಕರ ಮೇಲೆ ಬೀಳುತ್ತಿದೆ. ಹೀಗಾಗಿ ನಟಿಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಂಘದಲ್ಲಿ ಕೋರಲಾಗಿದೆ. ಪಟ್ಟಿಯಲ್ಲಿರುವ ಈ ನಟರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಮುಂದಿನ ವಾರ ಹೊರ ಬೀಳುವ ಸಾಧ್ಯತೆ ಇದೆ. (ಏಜೆನ್ಸೀಸ್)