

ಬೆಂಗಳೂರು: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 51 ವರ್ಷದ ವ್ಯಕ್ತಿಯೋರ್ವನನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅಮ್ಮಾವಾಸೈ ಮುರುಗೇಶನ್(51) ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯೂ ದೋಹಾ ಬೆಂಗಳೂರು ವಿಮಾನದಲ್ಲಿ ನಡೆದಿದೆ.
ಬಂಧಿತ ಆರೋಪಿ ಮುರುಗೇಶನ್ ತಮಿಳುನಾಡಿನ ಶಿವಗಂಗೆ ಮೂಲದವರಾಗಿದ್ದು, ದೋಹಾದ ಖಾಸಗಿ ಕಂಪನಿ ಒಂದರಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ದೋಹಾದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವ ಸಮಯದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮುರುಗೇಶನ್ ಪಕ್ಕ ಕುಳಿತ್ತಿದ್ದಳು. ಕೆಲ ಹೊತ್ತಿನ ಬಳಿಕ ಆರೋಪಿ ಬಾಲಕಿಯನ್ನು ಮಾತನಾಡಿಸಲು ಶುರು ಮಾಡಿದ್ದು, ಊಟ ತಿಂಡಿಯ ಏನಾದರೂ ಬೇಕಾಗಿದೆಯಾ ಎಂದು ಕೇಳಿದ್ದಾನೆ.
ಇದಾದ ಕೆಲ ಹೊತ್ತಿನ ಬಳಿಕ ಆರೋಪಿಯೂ ಬಾಲಕಿಯ ಜೊತೆಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ಗಮನಿಸಿದ ಆಕೆಯ ತಾಯಿ ತಕ್ಷಣವೇ ತನ್ನ ಪತಿ ಹಾಗೂ ಕ್ಯಾಬಿನ್ ಕ್ರೂ ಸಿಬ್ಬಂದಿಗೆ ತಿಳಿಸಿದ್ದಾರೆ.
ತಕ್ಷಣವೇ ಎಚ್ಚೆತ್ತ ಕ್ಯಾಬಿನ್ ಕ್ರೂ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.