ಬೆಂಗಳೂರು: ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಕಳೆದ ವರ್ಷ ನಟನೆಗೆ ಮರಳಿದ್ದು ಗೊತ್ತೇ ಇದೆ. ಪನ್ನಗ ಭರಣ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಭಾನುವಾರ ಆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ವಿಶೇಷವೆಂದರೆ, 'ತತ್ಸಮ ತದ್ಭವ' ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನೂರಕ್ಕೂ ಹೆಚ್ಚು ನಟ-ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿವೆ.
'ತತ್ಸಮ ತದ್ಭವ' ಚಿತ್ರವನ್ನು ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ನಿರ್ದಶನದ ಮೊದಲ ಚಿತ್ರ ಇದಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯವಾಗಿದೆ.
'ತತ್ಸಮ ತದ್ಭವ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕಿದೆ.