ವಿದ್ಯಾರ್ಥಿಗಳ ಜತೆ 'ತನುಜ' ಸಿನಿಮಾ ವೀಕ್ಷಿಸಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ

Tanuja - Nirmalananda Swamiji 1
Published on

ಬೆಂಗಳೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಈ ಹಿಂದೆ ಅನಂತ್​ ನಾಗ್​ ಅಭಿನಯದ 'ಬೆಳೆದಿಂಗಳ ಬಾಲೆ' ಚಿತ್ರವನ್ನು ನೋಡಿದ್ದರಂತೆ. ಆ ನಂತರ ಅವರು ಅದೆಷ್ಟೋ ವರ್ಷಗಳ ನಂತರ ಇದೀಗ 'ತನುಜ' ಚಿತ್ರವನ್ನು ನೋಡಿದ್ದಾರೆ. ಅಷ್ಟೇ ಅಲ್ಲ, 'ಕಠಿಣ ಪರಿಶ್ರಮ, ಏಕಾಗ್ರತೆ, ಗುರಿ ಮತ್ತು ಹೆತ್ತವರ ಹಾಗೂ ಗುರುವಿನ ಆಶೀರ್ವಾದಗಳ ಅದ್ಭುತ ಕಥನವೇ ಈ ಚಿತ್ರ' ಎಂದು ಹೊಗಳಿದ್ದಾರೆ.

ಒಂದು ತಿಂಗಳ ಹಿಂದೆ 'ತನುಜ' ಚಿತ್ರದ ನಿರ್ದೇಶಕ ಹರೀಶ್ ಎಂ.ಡಿ, ಸ್ವಾಮೀಜಿಗಳನ್ನು ಭೇಟಿ ಮಾಡಿದ್ದರಂತೆ. ಚಿತ್ರದ ಟ್ರೈಲರ್ ತೋರಸಿ ಅಭಿಪ್ರಾಯ ಕೇಳಿದರಂತೆ. 'ಚಿತ್ರದ ಸಣ್ಣ ಸಾರಾಂಶವನ್ನು ತಿಳಿದಿದ್ದ ನಾನು, ಈಗಲೇ ಏನನ್ನು ಹೇಳುವುದಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ನೂರಾರು ಮಕ್ಕಳ ಜೊತೆ ಪೂರ್ತಿ ಸಿನಿಮಾವನ್ನೇ ನೋಡುತ್ತೇನೆ ಎಂದು ಹೇಳಿ ಕಳುಹಿಸಿದೆ. ಅದೇ ಕಾರಣಕ್ಕೆ ನಾನು, ನನ್ನ ಮಕ್ಕಳ ಜತೆ ಸಿನಿಮಾ ನೋಡಿದ್ದೇನೆ' ಎಂದು ಹೇಳಿದರು.

ತಮ್ಮ ಸನ್ಯಾಸಪೂರ್ವದ ಜೀವನಕ್ಕೆ ಸಂಬಂಧಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ ಅವರು, 'ಬೆಂಗಳೂರಿಗೆ ಪದವಿ ಸೀಟು ಹಂಚಿಕೆಯ ಸಂದರ್ಶನಕ್ಕೆ ಬರುವಾಗ ಕೆರೆ ಒಡೆದು ,ರಸ್ತೆ ಕೊಚ್ಚಿ ಹೋಗಿ ಬೆಂಗಳೂರು ತಲುಪಲು ತಡವಾಯ್ತು. ಕೊನೆಗೆ ಓಡಿಹೋಗಿ ಸಂದರ್ಶನಕ್ಕೆ ಹಾಜರಾಗಿದ್ದನ್ನು' ಅವರು ನೆನೆಸಿಕೊಂಡರು.

'ತನುಜ' ಚಿತ್ರದ ಕುರಿತು ಮಾತನಾಡಿರುವ ಅವರು, 'ಇದೊಂದು ಅದ್ಭುತ ಪ್ರೇರಣೆಯ ಚಿತ್ರ. ಈ ಚಿತ್ರವು ಗುರಿಯ ಬಗ್ಗೆ ಮತ್ತು ಅದನ್ನು ತಲುಪುವಾಗ ಇರಬೇಕಾದ ಶ್ರದ್ಧೆಯ ಬಗ್ಗೆ ಬಹಳ ಸುಂದರವಾಗಿ ಕಟ್ಟಿಕೊಟ್ಟಿದೆ. ಆತ್ಮವಿಶ್ವಾಸ ಒಂದಿದ್ದರೆ ಇಡೀ ಪ್ರಪಂಚವೇ ನಿಮ್ಮೊಂದಿಗಿರುತ್ತದೆ ಮತ್ತು ಒಂದಲ್ಲಾ ಒಂದು ರೀತಿ ನಿಮ್ಮ ಸಹಾಯಕ್ಕೆ ಬರುತ್ತದೆ' ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net