ಸಿನಿವಾಣಿ

ಸಲ್ಮಾನ್​ ಚಿತ್ರದ ಫೈಟ್​ ನಿರ್ದೇಶಿಸಿದ ದ.ಕೊರಿಯಾದ ಖ್ಯಾತ ಸ್ಟಂಟ್​ ಮಾಸ್ಟರ್​!

manjunathktgns

ಮುಂಬೈ: ಲಾಕ್​ಡೌನ್​ನಿಂದ ಕಳೆದ ಆರು ತಿಂಗಳಿನಿಂದ ನಿಂತಿದ್ದ ಸಲ್ಮಾನ್​ ಖಾನ್​ ಅಭಿನಯದ 'ರಾಧೆ - ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​' ಚಿತ್ರದ ಚಿತ್ರೀಕರಣ ಕಳೆದ ವಾರವಷ್ಟೇ ಪುನಃ ಪ್ರಾರಂಭವಾಗಿದೆ. ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಸಹ ಮುಗಿದಿದೆ.

ಈ ಮಧ್ಯೆ, ಚಿತ್ರತಂಡದಿಂದ ಒಂದು ಸುದ್ದಿ ಹೊರಬಿದ್ದಿದ್ದು, ಅದರ ಪ್ರಕಾರ ದಕ್ಷಿಣ ಕೊರಿಯಾದ ಜನಪ್ರಿಯ ಸಾಹಸ ನಿರ್ದೇಶಕರೆನಿಸಿಕೊಂಡಿರುವ ಕ್ವೋನ್​ ಟಾಯ್​-ಹೋ ಅವರನ್ನು ಕರೆಸಿ ಒಂದು ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆಯಂತೆ.

ಚಿತ್ರದಲ್ಲಿ ಸಲ್ಮಾನ್​ ಖಾನ್​ ಅವರು ಒಬ್ಬ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಗೋವಾದ ಮಾಫಿಯಾ ವಿರುದ್ಧ ತಿರುಗಿಬೀಳುತ್ತಾರಂತೆ. ಈ ಸಂದರ್ಭದಲ್ಲಿ ಮಾಫಿಯಾದ ಬಾಸ್​ ಮತ್ತು ರಾಧೆ ನಡುವೆ ಒಂದು ಭಯಂಕರ ಫೈಟ್​ ಇದೆಯಂತೆ. ಆ ಫೈಟ್​ ನಿರ್ದೇಶಿಸುವುದಕ್ಕೆ ದಕ್ಷಿಣ ಕೊರಿಯಾದಿಂದ ಟಾಯ್​-ಹೋ ಅವರನ್ನು ಕರೆಸಲಾಗಿದೆ.

ಕಳೆದ ವರ್ಷವೇ ಟಾಯ್​-ಹೋ ಅವರು ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಈ ಸನ್ನಿವೇಶವನ್ನು ಹೇಗೆಲ್ಲಾ ಶೂಟ್​ ಮಾಡಬೇಕೆಂಬ ಸುಧೀರ್ಘ ಚರ್ಚೆಯಾಗಿತ್ತು. ಅಷ್ಟೇ ಅಲ್ಲ, ಒಂದು ತಿಂಗಳ ಕಾಲ ಟಾಯ್​-ಹೋ ಇಲ್ಲೇ ಇದ್ದು, ತಮ್ಮ ಭಾಗದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಬರೀ ಸಾಹಸ ದೃಶ್ಯಗಳನ್ನು ಸಂಯೋಜಿಸುವುದಷ್ಟೇ ಅಲ್ಲ, ಒಂದು ಚಿಕ್ಕ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದು, ಸಲ್ಮಾನ್​ ಜತೆಗೆ ಮುಖಾಮುಖಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

'ರಾಧೆ' ಚಿತ್ರದಲ್ಲಿ ಸಲ್ಮಾನ್​ ಖಾನ್​ಗೆ ನಾಯಕಿಯಾಗಿ ದಿಶಾ ಪಠಾಣಿ ನಟಿಸಿದ್ದು, ಮಿಕ್ಕಂತೆ ಜಾಕಿ ಶ್ರಾಫ್​, ರಣದೀಪ್​ ಹೂಡಾ ಮುಂತಾದವರು ನಟಿಸುತ್ತಿದ್ದಾರೆ. ಪ್ರಭುದೇವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.