ಮುಂಬೈ: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬಾಲಿವುಡ್ನಲ್ಲಿ ದೊಡ್ಡ ಸಂಚಲನವನ್ನೇ ಮಾಡಿತ್ತು. ಆದರೆ ಈಗಲ್ಲ ಎಂಬುದು ಸದ್ಯದ ಬೆಳವಣಿಗೆಗಳ ಮೂಲಕ ಸಾಬೀತಾಗುತ್ತಿದೆ. ಡ್ರಗ್ ಮಾಫಿಯಾದ್ದೇ ದೊಡ್ಡ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಶಾಂತ್ ಪ್ರಕರಣದ ತನಿಖೆಯ ಹಾದಿಯೇ ಬದಲಾಗುತ್ತಿದೆ ಎಂದು ನಟನ ಕುಟುಂಬದವರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಜೂನ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಎರಡು ತಿಂಗಳು ಆ ಸಾವಿನ ಸುತ್ತ ತನಿಖೆ ನಡೆಯುತ್ತಿತ್ತು. ಇದೀಗ ಆ ಸಾವಿನ ಹಿನ್ನೆಲೆ ಬದಿಗಿಟ್ಟು, ಎಲ್ಲರ ಗಮನ ಡ್ರಗ್ ಮಾಫಿಯಾದತ್ತ ನೆಟ್ಟಿದೆ. ತನಿಖಾ ತಂಡದ ಈ ಕಡೆಗಣನೆಯನ್ನು ಸುಶಾಂತ್ ಕುಟುಂಬ ಖಂಡಿಸುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸುಶಾಂತ್ ಸಿಂಗ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್, ‘ಕುಟುಂಬದ ದೃಷ್ಟಿಯಲ್ಲಿ ಇನ್ನೇನು ಸತ್ಯ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ಇದೀಗ ಎನ್ಸಿಬಿ ವಿಚಾರಣೆ ಮುಂಬೈ ಪೊಲೀಸ್ ವಿಚಾರಣೆಯನ್ನೇ ಹೋಲುತ್ತಿದೆ. ಡ್ರಗ್ ಪ್ರಕರಣವನ್ನೇ ಮುನ್ನೆಲೆಗೆ ತಂದು ತನಿಖೆ ನಡೆಸುತ್ತಿದ್ದಾರೆಯೇ ಹೊರತು, ಸುಶಾಂತ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಿಕಾಸ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)