ಚೆನ್ನೈ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಹಲವು ನಟ-ನಟಿಯರು ಸಂತಾಪ ಸೂಚಿಸಿದರೂ, ಅವರ ಅಂತಿಮ ದರ್ಶನ ಪಡೆದವರು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಬಹಳ ಕಡಿಮೆಯೆಂದೇ ಹೇಳಬಹುದು. ವಿಜಯ್ ಸೇರಿದಂತೆ ಬೆರಳಣಿಕೆಯಷ್ಟು ಸ್ಟಾರ್ ಕಲಾವಿದರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ, ಮಿಕ್ಕಂತೆ ಎಷ್ಟೋ ಜನ ದಿಗ್ಗಜ ಗಾಯಕನ ಅಂತಿಮ ದರ್ಶನ ಪಡೆಯಲಿಲ್ಲ.
ಅದರಲ್ಲೂ ಕಾಲಿವುಡ್ ನಟ ಅಜಿತ್ ಅವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂಬ ಅಪಸ್ವರವೊಂದು ವಿಪರೀತ ಕೇಳಿಬರುತ್ತಿದೆ. ಅಜಿತ್ ಅಭಿನಯದ ಬಹಳಷ್ಟು ಹಾಡುಗಳನ್ನು ಹಾಡಿದವರು ಎಸ್ಪಿಬಿ. ಅಜಿತ್ ಯಶಸ್ಸಿನಲ್ಲಿ ಎಸ್ಪಿಬಿ ಸಹ ಪಾಲುದಾರರು ಎಂದರೆ ತಪ್ಪಿಲ್ಲ. ಹಾಗಿರುವಾಗ ತಮಗೆ ಧ್ವನಿ ನೀಡಿದ ಗಾಯಕನ ಅಂತ್ಯಕ್ರಿಯೆಯಲ್ಲಿ ಅಜಿತ್ ಭಾಗವಹಿಸಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ.
ಈ ವಿಷಯವಾಗಿ, ಇದೀಗ ಎಸ್ಪಿಬಿ ಅವರ ಮಗ ಎಸ್ಪಿಬಿ ಚರಣ್ ಪ್ರತಿಕ್ರಿಯಿಸಿದ್ದಾರೆ. ಅಜಿತ್ ಬರದಿದ್ದರೆ ಏನಾಯ್ತು ಎಂದು ಕಾಲೆಳೆದವರನ್ನು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಚರಣ್, 'ಈ ವಿಷಯವಾಗಿ ನನಗೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟವಿಲ್ಲ. ಅಜಿತ್ ನನಗೆ ಒಳ್ಳೆಯ ಸ್ನೇಹಿತರು. ಅಪ್ಪನ ಜತೆಗೂ ಅವರಿಗೆ ಗೆಳೆತನವಿತ್ತು. ಅಜಿತ್ ಬರದಿದ್ದರೆ ಏನಂತೆ? ಅವರು ಮನೆಯಲ್ಲಿ ಕೂತು ದುಃಖಿಸುತ್ತಿರಬಹುದು. ಅವರು ಖುದ್ದು ಬರಲೇಬೇಕು, ನಮಗೆ ಸಮಾಧಾನ ಹೇಳಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಇಂತಹ ವಿಷಯಗಳನ್ನು ಚರ್ಚಿಸುವುದಕ್ಕೆ ಇದು ಸೂಕ್ತ ಸಮಯವಲ್ಲ ಎಂದಿರುವ ಅವರು, 'ನನ್ನಪ್ಪ ಇನ್ನಿಲ್ಲವಾಗಿದ್ದಾರೆ. ಜಗತ್ತು ಎಸ್ಪಿಬಿ ಎಂಬ ಅದ್ಭುತ ಗಾಯಕನನ್ನು ಕಳೆದುಕೊಂಡಿದೆ. ಈ ಬಗ್ಗೆ ದುಃಖಿಸುವುದು ಬಿಟ್ಟು, ಇಲ್ಲದ ವಿಷಯಗಳನ್ನು ವಿವಾದ ಮಾಡಬೇಡಿ' ಎಂದು ಅವರು ಹೇಳಿದ್ದಾರೆ.