ಸಿನಿವಾಣಿ

ಪ್ರೇಯಸಿ ನೋಡಲು ಮನವಿ ಮಾಡಿದವನಿಗೆ ಸೋನು ಸೂದ್​ ಕೊಟ್ಟ ಉತ್ತರ ಹೀಗಿತ್ತು ...

ಬೇರೆ ಬೇರೆ ರಾಜ್ಯಗಳಿಂದ ಮುಂಬೈನಲ್ಲಿ ಕೆಲಸಕ್ಕೆಂದು ಬಂದಿರುವ ಸಾವಿರಾರು ಜನರನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಬಾಲಿವುಡ್​ ನಟ ಸೂನು ಸೂದ್​. ಜತೆಗೆ ಟ್ವಿಟರ್​ನಲ್ಲಿಯೂ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುವ ಸೋನು, ರಿಯಲ್​ ಲೈಫ್​ನಲ್ಲಿ ಹೀರೋ ಆಗಿದ್ದಾರೆ. ಅದಕ್ಕವರ ಟ್ವಿಟ್​​ ಸಂದೇಶಗಳು, ಬೇರೆ ಬೇರೆ ಟ್ವಿಟರ್​ಗಳಿಗೆ ಪ್ರತಿಯಾಗಿ ನೀಡುವ ಉತ್ತರಗಳು ನೆಟ್ಟಿಗರ ಹೃದಯ ಗೆಲ್ಲುತ್ತಿವೆ. ಅವರ ಉತ್ತರಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.

ಹೌದು, ವಿಶ್ವಜೀತ್​ ದ್ವಿವೇದಿ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗುವ ಬಗ್ಗೆ ಹೀಗೊಂದು ಟ್ವೀಟ್​ ಮಾಡಿದ್ದ. ’ಅಣ್ಣ, ನನ್ನ ಪ್ರೇಯಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಿ. ಬಿಹಾರಕ್ಕೆ ಹೋಗಬೇಕಾಗಿದೆ’ ಎಂದಿದ್ದ. ಅದಕ್ಕೆ ಸೋನು ಸೂದ್​ ಅಷ್ಟೇ ಮಜವಾಗಿ ಉತ್ತರ ಕೊಟ್ಟಿದ್ದರು. ಆ ಉತ್ತರ ಸದ್ಯ ಎಲ್ಲೆಡೆ ಹರಿದಾಡಿ, ಮೆಚ್ಚುಗೆ ಜತೆಗೆ ಸೋನು ಸೋದ್​ ಹಾಸ್ಯವನ್ನು ಮನಸಾರೆ ಇಷ್ಟಪಡುತ್ತಿದ್ದಾರೆ. ‘ಒಂದಷ್ಟು ದಿನ ದೂರ ಇದ್ದು ನೋಡಿ ಬ್ರದರ್, ಅಸಲಿ ಪ್ರೀತಿಯ ಪರೀಕ್ಷೆ ನಡದೇ ಬಿಡಲಿ’ ಎಂದಿದ್ದಾರೆ.

ಇದು ಒಂದು ಕಡೆಯಾದರೆ, ಇತ್ತೀಚೆಗಷ್ಟೇ ಒಬ್ಬ ಆಸಾಮಿ, ‘ನಾನು ಸದ್ಯ ಮನೆಯಲ್ಲಿದ್ದೇನೆ. ದಯವಿಟ್ಟು ನನ್ನನ್ನು ವೈನ್​ ಶಾಪ್​ವರೆಗೂ ಬಿಡಿ‘ ಎಂದು ಕೇಳಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಸೋನು, ‘ನೋಡಿ ಬ್ರದರ್​. ವೈನ್​ ಶಾಪ್​ನಿಂದ ಮನೆವರೆಗೂ ಬಿಡಲು ಸಹಾಯ ಮಾಡಬಹುದು’ ಎಂದಿದ್ದರು. ಹೀಗೆ ಒಳ್ಳೇ ಕೆಲಸದ ಮೂಲಕ ನೆಟ್ಟಿಗರ ಮನವನ್ನೂ ಗೆಲ್ಲುತ್ತಿದ್ದಾರೆ ಸೋನು ಸೂದ್​. (ಏಜೆನ್ಸೀಸ್​)