ಸಿನಿವಾಣಿ

ಒಂದು ದಿನಕ್ಕೆ ಸೋನುಗೆ ಎಷ್ಟು ಮನವಿ ಬರುತ್ತೆ? ಕೇಳಿದ್ರೆ ಬೆಚ್ಚಿ ಬೀಳ್ತೀರಾ ...

ಕಳೆದ ಕೆಲವು ತಿಂಗಳುಗಳಿಂದ ಸೋನು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ, ಉತ್ತರಿಸುವುದು ಕಷ್ಟ. ಊರಿಗೆ ಕಳುಹಿಸುವುದರಿಂದ, ಕೆಲಸ ಕೊಡಿಸುವವರೆಗೆ ಸಾವಿರಾರು ಜನರಿಗೆ ಅವರು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ.

ಎಲ್ಲಾ ಸರಿ, ಸಹಾಯ ಮಾಡಿ ಅಂತ ಸೋನುಗೆ ಒಂದು ದಿನಕ್ಕೆ ಅದೆಷ್ಟು ಮನವಿಗಳು ಬರುತ್ತಿವೆ ಗೊತ್ತಾ? ಕೇಳಿದರೆ ನಿಜಕ್ಕೂ ಬೆಚ್ಚಿಬೀಳುತ್ತೀರಿ. ಅಷ್ಟರ ಮಟ್ಟಿಗೆ ದೇಶಾದ್ಯಂತ ಜನ, ತಮಗೆ ಸಹಾಯ ಮಾಡಿ ಎಂದು ಸೋನುಗೆ ಇಮೇಲ್​ ಮತ್ತು ಸೋಷಿಯಲ್​ ಮೀಡಿಯಾ ಮೂಲಕ ಮನವಿಗಳನ್ನು ಸಲ್ಲಿಸುತ್ತಾರಂತೆ. ಅಂದಹಾಗೆ, ಆ ಸಂಹ್ಯೆ ಎಷ್ಟು ಗೊತ್ತಾ? 32000 ...

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಸಹಾಯಕ್ಕಾಗಿ ಜನ ಮನವಿ ಮಾಡುತ್ತಲೇ ಇರುತ್ತಾರೆ. 1137 ಇಮೇಲ್​ಗಳು, 19 ಸಾವಿರ ಫೇಸ್​ಬುಕ್​ ಮೆಸೇಜ್​ಗಳು, 4812 ಇನ್​ಸ್ಟಾಗ್ರಾಂ ಮೆಸೇಜ್​ಗಳು ಮತ್ತು 6741 ಟ್ವಿಟರ್​ ಮೆಸೇಜುಗಳು ... ಇವೆಲ್ಲಾ ಇಂದು ಜನ ಕಳಿಸಿದ್ದು. ಪ್ರತಿದಿನ 32 ಸಾವಿರದಷ್ಟು ಮನವಿಗಳು ಬರುತ್ತವೆ. ಎಲ್ಲರಿಗೂ ಸಹಾಯ ಮಾಡುವುದು ಅಷ್ಟು ಸುಲಭವಲ್ಲ. ಆದರೂ ಪ್ರಯತ್ನಪಡುತ್ತಲೇ ಇದ್ದೇನೆ. ಯಾರದ್ದಾದರೂ ಮೆಸೇಜ್​ ಮಿಸ್​ ಆಗಿದ್ದರೆ, ಕ್ಷಮೆ ಇರಲಿ' ಎಂದು ಸೋನು ಕ್ಷಮೆ ಕೋರಿದ್ದಾರೆ.

ಇನ್ನು ಕೆಲವರು ತರಲೆ ಮಾಡುವವರು ಇದ್ದಾರೆ. ರಾಜಸ್ಥಾನಕ್ಕೆ ಹೋಗುವುದಕ್ಕೆ ಒಂದು ಕಾರ್​ ಬೇಕು ಎಂದು ಇತ್ತೀಚೆಗೆ ಒಬ್ಬರು ಕೇಳಿದ್ದರು. ಅದಕ್ಕೂ ಮುನ್ನ, ಒಂದು ಪ್ಲೇಸ್ಟೇಶನ್​ ಕೊಡಿ, ಇಂಟರ್​ನೆಟ್​ ಸ್ಪೀಡ್​ ಸರಿಯಿಲ್ಲ ... ಇಂತಹ ಹಲವು ತರಲೆ ಮೆಸೇಜುಗಳು ಹಾಕುವ ಸಾಕಷ್ಟು ಮನದಿ ಇದ್ದಾರೆ. ಅವರೆಲ್ಲರಿಗೂ ಸೋನು, ತಮ್ಮದೇ ಸ್ಟೈಲ್​ನಲ್ಲಿ ಹಾಸ್ಯಮಯವಾಗಿ ಚಾಟಿ ಬೀಸುತ್ತಲೇ ಬಂದಿದ್ದಾರೆ.