Regina Cassandra : ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.
ರೆಜಿನಾ ಅವರು ತೆಲುಗು, ತಮಿಳು ಮಾತ್ರವಲ್ಲದೆ, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಸರು ಪಡೆದುಕೊಂಡಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ, ಅನೇಕ ಸಿನಿಮಾಗಳಲ್ಲಿ ಐಟಂ ಸಾಂಗ್ಗಳಲ್ಲಿ ಸೊಂಟ ಬಳಕಿಸುವ ಮೂಲಕ ತಾನೊಬ್ಬ ಒಳ್ಳೆಯ ಡಾನ್ಸರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮಿಳು ಸೂಪರ್ಸ್ಟಾರ್ ಅಜಿತ್ ಅಭಿನಯದ ವಿಡಾಮುಯರ್ಚಿ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ರೆಜಿನಾಗೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇದರ ನಡುವೆ ಮಾಧ್ಯಮ ಸಂದರ್ಶನ ನೀಡಿರುವ ರೆಜಿನಾ, ಕೆಲ ನಿರ್ದೇಶಕರು ತಮಗೆ ಮೋಸ ಮಾಡಿದ್ದನ್ನು ಬಹಿರಂಗಪಡಿಸಿದ್ದಾರೆ.
ಸಾಮಾನ್ಯವಾಗಿ, ಸ್ಟಾರ್ ನಟರು ನಟಿಸಿದ ದೊಡ್ಡ ಬಜೆಟ್ ಚಿತ್ರಗಳಲ್ಲಿ ಮಹಿಳಾ ಕಲಾವಿದರಿಗೆ ಪ್ರಮುಖ ಪಾತ್ರಗಳನ್ನು ನೀಡುವುದಿಲ್ಲ. ಅನೇಕ ದೊಡ್ಡ ಬಜೆಟ್ ಚಿತ್ರಗಳಲ್ಲಿ ಮಹಿಳಾ ಪಾತ್ರಗಳನ್ನು ತೀರಾ ಕಳಪೆಯಾಗಿ ಬರೆಯುವ ರೀತಿ ನನಗೆ ಸದಾ ನಿರಾಶೆಯನ್ನು ಉಂಟು ಮಾಡುತ್ತದೆ ಎಂದು ರೆಜಿನಾ ಹೇಳಿದ್ದಾರೆ.
ಆದರೆ, ವಿಡಾಮುಯರ್ಚಿ ಸಿನಿಮಾದ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಅಲ್ಲದೆ, ಈ ಸಿನಿಮಾದಲ್ಲಿ ನಟ ಅಜಿತ್ ಮತ್ತು ನಿರ್ದೇಶಕ ಮಾಗಿಜ್ ತಿರುಮೇನಿ ಅವರೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ನೀಡಿತು. ಈ ಚಿತ್ರದಲ್ಲಿ ನಾನು ಒಪ್ಪಿಕೊಂಡ ಪಾತ್ರವನ್ನು ಬೇರೆ ಯಾರೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ನಿರ್ದೇಶಕರು ನನಗೆ ವಿಶ್ವಾಸ ನೀಡಿದರು. ಇಂತಹ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಬಲ್ಲೆ ಎಂದು ನನ್ನನ್ನು ನಂಬಿದ್ದಕ್ಕಾಗಿ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ ಎಂದು ರೆಜಿನಾ ತಿಳಿಸಿದರು.
ಒಂದು ಚಿತ್ರದಲ್ಲಿ ಮಹಿಳಾ ಪಾತ್ರವನ್ನು ಹೇಗೆ ಬರೆಯಲಾಗಿದೆ ಎಂಬುದನ್ನು ನೋಡಿದರೆ ಸಾಕು ಆ ಚಿತ್ರದ ಕತೆ ಹೇಗಿರುತ್ತದೆ ಎಂದು ನಿಮಗೆ ತಿಳಿಯುತ್ತದೆ. ಅದಕ್ಕಾಗಿಯೇ ನಾನು ಕೆಲವು ನಿರ್ದೇಶಕರನ್ನು ನಂಬುತ್ತೇನೆ. ಆದರೆ ಕೆಲವು ನಿರ್ದೇಶಕರು ನನ್ನನ್ನು ತುಂಬಾ ನಿರಾಸೆಗೊಳಿಸಿದ್ದಾರೆ. ಕತೆಯನ್ನು ನಿರೂಪಣೆ ಮಾಡುವಾಗ ಹೇಳುವುದೇ ಬೇರೆ ಆದರೆ, ಶೂಟಿಂಗ್ ಮಾಡುವಾಗ ಚಿತ್ರಿಸುವುದೇ ಬೇರೆ. ಈ ರೀತಿ ಮಾಡಿ ಕೆಲ ನಿರ್ದೇಶಕರು ವಂಚಿಸಿದ್ದಾರೆ. ಅದಕ್ಕಾಗಿಯೇ ನನಗೆ ಹೇಳುವ ಪ್ರತಿಯೊಂದು ಕತೆಯಲ್ಲಿ ನಾನು ವಿಶಿಷ್ಟವೆಂದು ಭಾವಿಸಿದರೆ ಮಾತ್ರ ನಟಿಸಲು ಒಪ್ಪುತ್ತೇನೆ ಎಂದು ರೆಜಿನಾ ಅವರು ಹೇಳಿದರು. (ಏಜೆನ್ಸೀಸ್)