| ಹರ್ಷವರ್ಧನ್ ಬ್ಯಾಡನೂರು
ಶಿವರಾಜಕುಮಾರ್, ಸದ್ಯ ಕನ್ನಡದ ಅತ್ಯಂತ ಬಿಜಿ ನಟ. ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲದೇ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. "ಜೈಲರ್', "ಕ್ಯಾಪ್ಟನ್ ಮಿಲ್ಲರ್' ಜತೆ "ಘೋಸ್ಟ್', "ಕರಟಕ ದಮನಕ', "45', "ಬೈರತಿ ರಣಗಲ್'… ಹೀಗೆ ಅವರ ಸಿನಿಮಾಗಳ ಲಿಸ್ಟ್ ಸಾಗುತ್ತದೆ. ಹಾಗಾದರೆ ಆ ಸಿನಿಮಾಗಳು ಈಗ ಯಾವ ಹಂತದಲ್ಲಿವೆ? ಪಾತ್ರವೇನು? ಅಂತ ಖುದ್ದು ಶಿವಣ್ಣ ಮಾತನಾಡಿದ್ದಾರೆ.
"ಜೈಲರ್', "ಕ್ಯಾಪ್ಟನ್ ಮಿಲ್ಲರ್'ನಲ್ಲಿ ಕ್ಯಾಮಿಯೋ
"ಜೈಲರ್' ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳಿಕೊಳ್ಳುವ ಶಿವಣ್ಣ, "ಸಿನಿಮಾ ಒಪ್ಪಿಕೊಳ್ಳಲು ರಜಿನಿ ಸರ್ ಮತ್ತು ನೆಲ್ಸನ್ ಇಬ್ಬರೂ ಕಾರಣ. "ಬೈರಾಗಿ' ಶೂಟಿಂಗ್ ಸಮಯದಲ್ಲಿ ನೆಲ್ಸನ್ ಬಂದಿದ್ದರು. ನೋಡಿ ಖುಷಿಪಟ್ಟಿದ್ದರು. ನಿಮ್ಮ ಜತೆ ಕೆಲಸ ಮಾಡಬೇಕು ಅಂತ ಆಗಲೇ ಹೇಳಿದ್ದರು. ನೀವು ಜೈಲರ್ ಸಿನಿಮಾದಲ್ಲಿ ನಟಿಸಲೇಬೇಕು ಅಂದರು. ರಜಿನಿ ಸರ್ ಬಳಿ ಹೇಳಿದಾಗ ಅವರೂ ಖುಷಿಪಟ್ಟರಂತೆ. ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯಿದೆ. ನಾನೇ ತಮಿಳಿನಲ್ಲಿ ಡಬ್ ಮಾಡಿದ್ದೇನೆ. ಸಣ್ಣ ವಯಸ್ಸಿನಿಂದ ರಜಿನಿಕಾಂತ್ ನಮ್ಮನ್ನು ನೋಡುತ್ತಿದ್ದಾರೆ. ಅವರನ್ನು ಅಂಕಲ್ ಎನ್ನುತ್ತೇವೆ. ನಮ್ಮ ಕುಟುಂಬದ ಜತೆ ಉತ್ತಮ ಸಂಬಂಧವಿದೆ. ಚಿಕ್ಕ ಪಾತ್ರವಾದರೂ 10, 11 ನಿಮಿಷ ಬರುತ್ತೇನೆ. ಆದರೆ, ತುಂಬ ಚೆನ್ನಾಗಿ ತೋರಿಸಿದ್ದಾರೆ. ಮಂಗಳೂರು, ಚೆನ್ನೆ$ನಲ್ಲಿ ಚಿತ್ರೀಕರಣ ಮಾಡಿದ್ದಾರೆ' ಎನ್ನುತ್ತಾರೆ. ಇನ್ನು ಧನುಷ್ ನಾಯಕನಾಗಿರುವ "ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣ ಪೂರ್ಣಗೊಂಡಿದ್ದು, ಅದರಲ್ಲಿ ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
ಈ ವರ್ಷ "ಘೋಸ್ಟ್', "ಕರಕಟ ದಮನಕ'
ಕಳೆದ ವರ್ಷ "ವೇದ' ಚಿತ್ರದ ಶಿವಣ್ಣ ಮತ್ತೆ ನಾಯಕನಾಗಿ ಕಾಣಿಸಿಕೊಂಡಿಲ್ಲ. ಆದರೆ, ಈ ವರ್ಷ ಅವರು ನಾಯಕನಾಗಿರುವ "ಘೋಸ್ಟ್' ಮತ್ತು "ಕರಟಕ ದಮನಕ' ರಿಲೀಸ್ ಆಗಲಿವೆ. ""ಘೋಸ್ಟ್' ಚಿತ್ರೀಕರಣ ಪೂರ್ಣಗೊಂಡಿದೆ. "ಕರಟಕ ದಮನಕ' ಕೂಡ ಅಂತಿಮ ಹಂತದಲ್ಲಿದೆ. "ಬೈರತಿ ರಣಗಲ್' ಮತ್ತು "45' ಎರಡರ ಚಿತ್ರೀಕರಣ ನಡೆಯುತ್ತಿದೆ. ಆ ನಂತರ "ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್' ಪ್ರಾರಂಭ' ಎಂದು ಮಾಹಿತಿ ನೀಡುತ್ತಾರೆ ಶಿವಣ್ಣ.
ಪರಭಾಷೆಗಳಿಂದ ಹೆಚ್ಚಿದ ಆಫರ್ಸ್
ಪರಭಾಷೆಗಳಿಂದಲೂ ಶಿವಣ್ಣಗೆ ಹೆಚ್ಚು ಅವಕಾಶಗಳು ಬರುತ್ತಿವೆಯಂತೆ. ಆದರೆ, ಕನ್ನಡದಲ್ಲೇ ಬಿಜಿಯಾಗಿರುವ ಕಾರಣ ಬೇರೆ ಭಾಷೆಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎನ್ನುತ್ತಾರೆ. ಶಿವಣ್ಣ, "ಪೃಥ್ವಿರಾಜ್ ಸುಕುಮಾರನ್ ಜತೆ ಮಲಯಾಳಂ ಸಿನಿಮಾ ಆರ್ ಇದೆ. ಸದ್ಯಕ್ಕಿನ್ನೂ ಮಾತುಕತೆ ನಡೆಯುತ್ತಿದೆ. ಅದರ ಜತೆ ಒಂದೆರಡು ಹೈದರಾಬಾದ್ ತಂಡಗಳ ಜತೆ ಚರ್ಚೆ ನಡೀತಿದೆ. ಚಿತ್ರರಂಗಕ್ಕೆ ಬಂದು 37 ವರ್ಷಗಳಾಗಿವೆ. ಒಂದು ಸುತ್ತು ಹಾಕಿಕೊಂಡು ಬರೋಣ ಅಂತಷ್ಟೇ' ಎಂದು ನಗುತ್ತಾರೆ.
ಇನ್ನೆರಡು ಕಥೆಗಳು ಅಂತಿಮ
ಈ ಸಿನಿಮಾಗಳ ಜತೆ ಶಿವಣ್ಣ ಇನ್ನೂ ಎರಡು ಕಥೆಗಳನ್ನು ಓಕೆ ಮಾಡಿದ್ದಾರಂತೆ. ಜತೆಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಜತೆಗೆ ಒಂದು ಚಿತ್ರದ ಮಾತುಕತೆ ನಡೆಯುತ್ತಿದೆಯಂತೆ. "ಇನ್ನುಮುಂದೆ ವರ್ಷಕ್ಕೆ ಎರಡು, ಮೂರು ಸಿನಿಮಾ ನಿರ್ಮಿಸಲಿದ್ದೇವೆ. ಪುತ್ರಿ ನಿವೇದಿತಾ ಸದ್ಯ ಫೈರ್ಫ್ಲೈ ಸಿನಿಮಾ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ "ಈಗ್ಲೂ' ಎಂಬ ಕಥೆ ಹೇಳಿದ್ದು, ಅದನ್ನು ನಾವು ನಿರ್ಮಿಸಲಿದ್ದೇವೆ. ಮುಂದೆ ವೆಬ್ಸರಣಿಗಳನ್ನೂ ಮಾಡುವ ಆಲೋಚನೆಯಿದೆ' ಎಂದು ಹೇಳಿಕೊಳ್ಳುತ್ತಾರೆ.