ಸಿನಿವಾಣಿ

‘ಪುಗ್ಸಟ್ಟೆ ಲೈಫು' ನಿರ್ದೇಶಕರ ಹೊಸ ಚಿತ್ರದಲ್ಲಿ ಎಲೆಕ್ಟ್ರಿಷಿಯನ್ ಆಗಲಿರುವ ಶರಣ್​

ಬೆಂಗಳೂರು: ಹೀರೋಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರಗಳ ಘೋಷಣೆ ಆಗುತ್ತಿರುತ್ತವೆ. ಶರಣ್​ ಸಹ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಹೊಸ ಚಿತ್ರವೊಂದರ ಘೋಷಣೆಯಾಗಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.

ಅಂದಹಾಗೆ, ಶರಣ್​ ನಿರ್ದೇಶನದ ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ‘ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಖ್ಯಾತಿಯ ಅರವಿಂದ್ ಕುಪ್ಲಿಕರ್. ಶರಣ್​ ಅವರ ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿರಲಿಲ್ಲದ್ದು, ಇಲ್ಲಿ ಅವರು ಎಲೆಕ್ಟ್ರಿಷಿಯನ್ ಪಾತ್ರ ನಿರ್ವಹಿಸುತ್ತಿದ್ದಾರಂತೆ.

ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದ ಜತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ಅರವಿಂದ್​ ಬರೆದಿದ್ದಾರೆ. ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಶರಣ್​ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್​ ನಟಿಸುತ್ತಿದ್ದು, ಮಿಕ್ಕಂತೆ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಸಾಕಷ್ಟು ಪ್ರತಿಭಾವಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಅವರ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.