ಗಾನಕೋಗಿಲೆಯ ಸ್ಮರಣೆ: ಲತಾ ಮಂಗೇಶ್ಕರ್ ಮರೆಯಾಗಿ ಒಂದು ವರ್ಷ

Latha Mangeshkar
Published on

‘ಏ ಮೇರೆ ವತನ್ ಕೆ ಲೋಗೋ..’

1963 ಜನವರಿ 27. ಭಾರತ-ಚೀನಾ ಯುದ್ಧದಲ್ಲಿ ಮಡಿದ ಯೋಧರ ಗೌರವಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ಕೋಗಿಲೆ, ಗಾನ ಸರಸ್ವತಿ ಲತಾ ಮಂಗೇಶ್ಕರ್ ‘ಏ ಮೇರೆ ವತನ್ ಕೆ ಲೋಗೋ..’ ಗೀತೆ ಹಾಡಿದಾಗ ಅಲ್ಲಿ ನೆರೆದಿದ್ದ ಸಮಸ್ತರ ಕಣ್ಣಲ್ಲಿ ಭಾವಧಾರೆ ಕೋಡಿಯಾಗಿ ಹರಿದಿತ್ತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅಕ್ಷರಶಃ ಅತ್ತುಬಿಟ್ಟರು. ಪ್ರದೀಪ್ ಬರೆದ, ಸಿ. ರಾಮಚಂದ್ರ ಸಂಗೀತ ಸಂಯೋಜಿಸಿದ್ದ ‘ಏ ಮೇರೆ ವತನ್ ಕೆ ಲೋಗೋ..’ ಗೀತೆ ಲತಾ ಅವರ ಮಾಧುರ್ಯದ ಕಂಠದಲ್ಲಿ ದೇಶದ ನಾಡಿ ಮಿಡಿದಿತ್ತು. ಗಾಯನ ಮುಗಿದ ಬಳಿಕ ವೇದಿಕೆಯಿಂದ ನಿರ್ಗಮಿಸುತ್ತಿದ್ದ ಲತಾ ಅವರನ್ನು ನಿರ್ವಪಕ ಮೆಹಬೂಬ್ ಖಾನ್, ‘ಒಂದು ನಿಮಿಷ ಬನ್ನಿ’ ಎಂದು ಸೀದಾ ಪಂಡಿತ್ ನೆಹರೂ ಬಳಿ ಕರೆದೊಯ್ದರು. ನೆಹರು ಗದ್ಗದಿತರಾಗಿದ್ದರು. ಕಣ್ಣು ತುಂಬಿದ್ದವು. ‘ಎಂಥ ನಿರಭಿಮಾನಿಯ ಹೃದಯದಲ್ಲೂ ದೇಶಪ್ರೇಮ ಬಡಿದೆಬ್ಬಿಸುವ ಗೀತೆ. ನೀವದನ್ನು ತುಂಬಾ ಸುಂದರವಾಗಿ ಹಾಡಿದಿರಿ’ ಎಂದರು. ‘ನೆಹರು ಹೊಗಳಿದ್ದು ತಮ್ಮ ಬದುಕಿನ ಅತ್ಯಂತ ಶ್ರೇಷ್ಠ ಗಳಿಗೆ’ ಎಂದು ಲತಾಜಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. 1942ರಿಂದ ಹಾಡಲು ಆರಂಭಿಸಿದ ‘ಭಾರತ ರತ್ನ’ ಲತಾ ಮಂಗೇಶ್ಕರ್ ನಿರಂತರವಾಗಿ ಏಳು ದಶಕ ಕಾಲ ಸಂಗೀತದ ಗಂಗಾವತರಣದ ಮೂಲಕ ಸಹೃದಯಿಗಳನ್ನು ಪಾವನಗೊಳಿಸಿದವರು. 2022 ಫೆ. 6ರಂದು ತಮ್ಮ 92ನೇ ವಯಸ್ಸಿನಲ್ಲಿ ನಾದಸರಸ್ವತಿಯಲ್ಲಿ ಲೀನರಾದ ಲತಾ ಅವರ ಮೊದಲ ಪುಣ್ಯಸ್ಮರಣೆ ಸೋಮವಾರ. ಲತಾ ಅವರ ಗಾನಜೀವನದ ಕೆಲವು ಮೆಲುಕು ಇಲ್ಲಿದೆ.

ಯಾರಿಗಾಗಿ ಹಾಡುತ್ತಿದ್ದೀನಿ?: ‘ದಿಲ್​ಸೆ’ ಚಿತ್ರದ ‘ಜಿಯಾ ಜಲೇ ಜಾನ್ ಜಲೇ’ ಗೀತೆಯ ರೆಕಾರ್ಡಿಂಗ್ ಸಂದರ್ಭ. ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಲತಾ ಮೊದಲ ಬಾರಿಗೆ ಹಾಡುತ್ತಿದ್ದರು. ರೆಹಮಾನ್ ಸ್ಟುಡಿಯೋದಲ್ಲೇ ರೆಕಾರ್ಡಿಂಗ್ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಲತಾಜಿ ಸ್ಟುಡಿಯೋಕ್ಕೆ ಬಂದರು. ಸ್ಟುಡಿಯೋ ಅತ್ಯಾಧುನಿಕ ಸಂಗೀತ ಸಾಧನಗಳಿಂದ ಕೂಡಿತ್ತು. ಜತೆಗೆ ಪ್ರಶಾಂತವಾಗಿತ್ತು. ಗಾಯಕರು ಹಾಡಲು ನಿಲ್ಲುವ ಸ್ಥಳ ಗಾಜಿನಿಂದ ಮಾಡಿದ ಕೋಣೆ, ಅಲ್ಲಿಂದ ಏನೂ ಕಾಣಿಸುತ್ತಿರಲಿಲ್ಲ. ಲತಾಜಿಗೆ ಅಲ್ಲಿ ನಿಂತು ಹಾಡುವುದು ಕಷ್ಟವೆನಿಸಿತು. ‘ಇಲ್ಲಿ ನಾನು ಯಾರಿಗಾಗಿ ಹಾಡುತ್ತಿದ್ದೀನಿ’ ಎಂದು ಕೇಳಿದರು. ಒಬ್ಬರು ಮಾತ್ರ ನಿಂತು ಹಾಡಬಹುದಾಗಿದ್ದ ಆ ಪುಟ್ಟ ಸ್ಥಳದಲ್ಲಿ ಗುಲ್ಜಾರ್ ಒಂದು ಪುಟ್ಟ ಸ್ಟೂಲ್ ಹಾಕಿಕೊಂಡು ಕೂತರು. ಅದ್ಭುತವಾದ ಹಾಡೊಂದು ಚಿತ್ರರಂಗದಲ್ಲಿ ದಾಖಲಾಯಿತು.

ಶಾಲೆಗೆ ಹೋಗಲಿಲ್ಲ ...: ಲತಾ ಮಂಗೇಶ್ಕರ್ ಎಲ್ಲರಂತೆ ಓದಲಿಲ್ಲ, ಶಾಲೆಗೆ ಹೋಗಲಿಲ್ಲ. ಅದಕ್ಕೆ ಎರಡು ಕಾರಣಗಳು. ಶಾಲೆಗೆ ಹೋದ ದಿನವೇ ತರಗತಿಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲು ಲತಾ ಶುರು ಮಾಡಿದ್ದರಂತೆ. ಸಿಟ್ಟಿಗೆದ್ದ ಮೇಷ್ಟ್ರು ಲತಾರನ್ನು ಶಾಲೆಯಿಂದ ಹೊರಹಾಕಿದರಂತೆ. ಇನ್ನೊಂದು. ತಂಗಿ ಆಶಾರನ್ನು ಲತಾ ಬಿಟ್ಟಿರುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಆಕೆಯನ್ನು ಜತೆಗೆ ಕರೆದೊಯ್ಯುತ್ತಿದ್ದರು. ಮೇಷ್ಟ್ರು, ಲತಾರನ್ನು ನಿಲ್ಲಿಸಿ ಒಬ್ಬರ ಶುಲ್ಕದಲ್ಲಿ ಇಬ್ಬರಿಗೆ ಪ್ರವೇಶ ಕೊಡಲು ಸಾಧ್ಯವಿಲ್ಲ ಎಂದು ಶಾಲೆಯಿಂದ ಹೊರ ಹಾಕಿದರು. ಹಾಗಾಗಿ ಲತಾಜಿ ಮತ್ತೆಂದೂ ಶಾಲೆ ಮೆಟ್ಟಿಲು ಹತ್ತಲಿಲ್ಲ.

ಲತಾ ನೆನಪಿನ ಮಾಲಿಕೆ

  • ಲತಾ ಹಾಡುವಾಗ ಬರಿಗಾಲಲ್ಲಿರುತ್ತಿದ್ದರು
  • ಮೊದಲು ಕಲಿತ ರಾಗ ಪೂರಿಯಾ ಧನಶ್ರೀ
  • ಲಂಡನ್ನಿನ ರಾಯಲ್ ಆಲ್ಬರ್ಟ್ ಹಾಲ್​ನಲ್ಲಿ (1972) ಕಾರ್ಯಕ್ರಮದ ನೀಡಿದ ಮೊದಲ ಭಾರತೀಯ ಪ್ರಜೆ.
  • 1941ರ ಡಿಸೆಂಬರ್ 16ರಂದು ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹಾಡಿದ್ದರು.ಇದನ್ನು ಕೇಳಿದ ತಂದೆ ದೀನಾನಾಥರು ತನ್ನ ಕುಟುಂಬವನ್ನು ಅತಿ ಎತ್ತರಕ್ಕೆ ಒಯ್ಯುತ್ತಾಳೆ ಎಂದು ಅಭಿಮಾನದಿಂದ ಕಣ್ಣು ತುಂಬಿಕೊಂಡಿದ್ದರು.
  • 1984ರಲ್ಲಿ ಮ.ಪ್ರದೇಶ ಲತಾಜಿ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿದೆ.
  • ಸತ್ಯಜಿತ್ ರೇ ಬಿಟ್ಟರೆ ಭಾರತ ರತ್ನ ಮತ್ತು ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಮತ್ತೊಬ್ಬರು ವ್ಯಕ್ತಿ ಲತಾ ಮಂಗೇಶ್ಕರ್.
  • ಕನ್ನಡದ ಸಂಗೊಳ್ಳಿ ರಾಯಣ್ಣ (ಹಳೆಯ) ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಸೇರಿ 2 ಗೀತೆಗಳನ್ನು ಹಾಡಿದ್ದಾರೆ.
  • ಕೆ.ಎಲ್. ಸೈಗಲ್ ಹಾಡುಗಳೆಂದರೆ ಲತಾಜಿಗೆ ಪ್ರಾಣ. ತಂದೆ ಎಂದೂ ಮನೆಯಲ್ಲಿ ಚಿತ್ರಗೀತೆಗಳನ್ನು ಹಾಡಲು ಒಪ್ಪುತ್ತಿರಲಿಲ್ಲ. ಆದರೂ ಕೆ.ಎಲ್. ಸೈಗಲ್ ಹಾಡು ಹಾಡುತ್ತಿದ್ದರೆ ತಂದೆ ಸುಮ್ಮನಿರುತ್ತಿದ್ದರು.
  • ಲತಾ ರೇಡಿಯೋ ಖರೀದಿಸಿದಾಗ 18 ವರ್ಷ. ಅದನ್ನು ಆನ್ ಮಾಡುತ್ತಿದ್ದಂತೆ ಅವರು ಕೇಳಿದ್ದು ಕೆ.ಎಲ್. ಸೈಗಲ್ ಅವರ ಸಾವಿನ ಸುದ್ದಿ. ತಕ್ಷಣ ರೇಡಿಯೋವನ್ನು ಹಿಂದಿರುಗಿಸಿದರು.
  • ಶಾಲೆಯಲ್ಲಿ ಓದಲಿಲ್ಲ. ಅವರು ಅಕ್ಷರಗಳನ್ನು ಕಲಿತಿದ್ದು ತನ್ನ ಮನೆ ಸೇವಕರಿಂದ.
  • ಲತಾ ಅವರ ಮೂಲ ಹೆಸರು ಹೇಮಾ.
  • ಲತಾಜಿ ಉರ್ದು ಜ್ಞಾನದ ಬಗ್ಗೆ ದಿಲೀಪ್ ಕುಮಾರ್ ಒಮ್ಮೆ ವ್ಯಂಗ್ಯವಾಡಿದ್ದರು. ಮರಾಠಿಗರಿಗೆ ಉರ್ದು ಪದಗಳ ಉಚ್ಚಾರಣೆಯೇ ಬರುವುದಿಲ್ಲ ಎಂದು ಕಟಕಿಯಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಲತಾ, ಮೌಲ್ವಿಯೊಬ್ಬರನ್ನು ಮನೆಗೆ ಕರೆಸಿಕೊಂಡು ಉರ್ದು ಕಲಿತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net