ಸಿನಿವಾಣಿ

ನವೆಂಬರ್​ನಲ್ಲಿ 'ಸರ್ವಂ' ಆರಂಭ; ನಟನೆ ಜತೆಗೆ ನಿರ್ದೇಶನಕ್ಕೆ ರಾಜ್​ಪ್ರಭು

manjunathktgns

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸುಮಾರು ಆರು ತಿಂಗಳ ಕಾಲ ಚಿತ್ರರಂಗ ಬಂದ್​ ಆಗಿತ್ತು. ಇದೀಗ ಕ್ರಮೇಣ ಚಿತ್ರೀಕರಣ ಚಟುವಟಿಗಳು ಪ್ರಾರಂಭವಾಗಿದ್ದು, ಕಳೆದ ಒಂದು ತಿಂಗಳಲ್ಲಿ ಹಲವು ಹೊಸ ಚಿತ್ರಗಳು ಪ್ರಾರಂಭವಾಗಿವೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಸೆಟ್ಟೇರುವುದಕ್ಕೆ ತಯಾರಿ ನಡೆಸಿದ್ದು, ಈ ಪೈಕಿ 'ಸರ್ವಂ' ಸಹ ಒಂದು.

'ಮೊಂಬತ್ತಿ', 'ತಮಸ್​', 'ಛಾಯಾ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಜ್​ಪ್ರಭು, ಇದೀಗ 'ಸರ್ವಂ' ಚಿತ್ರದಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ನಟಿಸುವುದರ ಜತೆಗೆ, ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಸಹ ಅವರೇ ಹೊತ್ತಿದ್ದಾರೆ. ಇನ್ನು ಜಗ್ಗು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಲವ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ 'ಸರ್ವಂ' ಚಿತ್ರದ ಚಿತ್ರೀಕರಣ ನವೆಂಬರ್ 10ರಿಂದ ಆರಂಭವಾಗಲಿದೆ.

ರಾಜ್​ಪ್ರಭುಗೆ ನಾಯಕಿಯಾಗಿ ಅಕ್ಷತಾ ನಾಗರಾಜ್ ನಟಿಸುತ್ತಿದ್ದು, ಮಿಕ್ಕಂತೆ ದಾರಾ ಶರೀಫ್, ಅಫ್ಜಲ್​, ಎಂ.ಡಿ.ಕೌಶಿಕ್, ರಾಜ್ ಉದಯ್, ಜಾಯ್ ಸಿ ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಹಾಸನ ಹಾಗೂ ಮಂಗಳೂರಿನಲ್ಲಿ 'ಸರ್ವಂ' ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆಯಲಿದೆ.

'ಸರ್ವಂ' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಐದು ಸಾಹಸ ಸನ್ನಿವೇಶಗಳಿಗೆ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಕಲನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.