

ಮುಂಬೈ: ಕೆಲವೇ ದಿನಗಳ ಹಿಂದಿನ ಮಾತು. ಕರೊನಾ ಮತ್ತು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದ ಜನರ ಸಹಾಯಕ್ಕೆ ನಿಂತವರು ಬಾಲಿವುಡ್ ನಟ ಸೋನು ಸೂದ್. ಸಾವಿರಾರು ಜನರನ್ನು ತಮ್ಮ ಊರಿಗೆ ಕಳುಹಿಸಿಕೊಡುವ ಜತೆಗೆ ಅವರಿಗೆ ಅಲ್ಲಿ ಕೆಲಸ ಸಿಗುವಂತೆ ನೋಡಿಕೊಂಡವರು ಅವರು. ಅಲ್ಲಿಂದ ಸತತವಾಗಿ ಒಂದಿಲ್ಲೊಂದು ಸಹಾಯ ಮಾಡುತ್ತಲೇ ಇರುವ ಸೋನು, ನ್ಯಾಷನಲ್ ಹೀರೋ ಆಗಿ ಬೆಳೆದರು.
ಇದನ್ನೂ ಓದಿ: ಅನರ್ಘ್ಯ ಅದಿತಿ : ‘ಆನ’ ಎಂಬ ಲೇಡಿ ಸೂಪರ್ ಹೀರೋ
ಆದರೆ, ಯಾರು ಅವರಿಗೆ ಹಿಂದೊಮ್ಮೆ ಜೈಕಾರ ಹಾಕಿದರೋ, ಈಗ ಅವರೇ ಸೋನು ವಿರುದ್ಧ ತಿರುಗಿಬಿದ್ದಿದ್ದಾರೆ. ಸೋನು ಸಹಾಯ ಮಾಡುತ್ತಿರುವುದು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಸೋನು ಇತ್ತೀಚೆಗೆ ಮಾಡಿದ ಒಂದು ಟ್ವೀಟ್. ಈ ಟ್ವೀಟ್ ನೋಡಿ, ಜನ ಸೋನು ಮಾಡುತ್ತಿರುವುದು ಅಪ್ಪಟ ನಾಟಕ ಎಂದು ಕಾಲೆಳೆಯುತ್ತಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಭಾನುವಾರ ಸ್ನೇಹಲ್ ಮಿಸಲ್ ಎನ್ನುವವರು ಒಂದು ಟ್ವೀಟ್ ಮಾಡಿದ್ದರು. ತಮ್ಮ ಮಗನಿಗೆ ತುರ್ತಾಗಿ ಓಪನ್ ಹಾರ್ಟ್ ಸರ್ಜರಿ ಆಗಬೇಕಿದ್ದು, ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೋನು, ಮರುದಿನವೇ ಆಪರೇಷನ್ ಮಾಡಿಸುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡುವುದಾಗಿ ಉತ್ತರ ಕೊಟ್ಟಿದ್ದರು.
ಟ್ವಿಸ್ಟ್ ಇರುವುದೇ ಇಲ್ಲಿ. ಸ್ನೇಹಲ್ ಅವರು ಬರೀ ಟ್ವೀಟ್ ಮಾಡಿದ್ದರೇ ಹೊರತು. ಯಾರನ್ನೂ ಟ್ಯಾಗ್ ಮಾಡಿರಲಿಲ್ಲ. ಆದರೆ, ಸೋನು ಮಾತ್ರ ಸ್ನೇಹಲ್ ಅವರ ಟ್ವೀಟ್ಗೆ ಉತ್ತರ ಕೊಟ್ಟಿದ್ದರು. ನೆಟ್ಟಿಗರಿಗೆ ಅನುಮಾನ ಬಂದಿದ್ದೇ ಆಗ. ಸೋನು ಅವರನ್ನು ಟ್ಯಾಗ್ ಮಾಡದಿದ್ದರೂ, ಅವರು ಉತ್ತರ ಕೊಟ್ಟಿದ್ದು ಯಾಕೆ? ಅದರಲ್ಲೂ ಸ್ನೇಹಲ್ಗೇ ಉತ್ತರ ಕೊಟ್ಟಿದ್ದು ಹೇಗೆ? ಎಂಬಂತಹ ಪ್ರಶ್ನೆಗಳನ್ನು ಎತ್ತುವುದರ ಜತೆಗೆ, ಬಹುಶಃ ಇದು ಸೋನು ಅವರ ಪ್ರಚಾರದ ತಂಡದ ತಂತ್ರವೇ ಇರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಇದಕ್ಕೆ ಉತ್ತರಿಸಿರುವ ಸೋನು, 'ಅಗತ್ಯವಿರುವವರು ನನ್ನನ್ನು ಹೇಗೋ ಹುಡುಕಿಕೊಂಡು ಬರುತ್ತಾರೆ ಅಥವಾ ಅಗತ್ಯವಿರುವವರಿಗೆ ನಾನು ಹೇಗೋ ತಲುಪುತ್ತೇನೆ. ಇಲ್ಲಿ ಉದ್ದೇಶವಷ್ಟೇ ಮುಖ್ಯ. ಕೆಲವರಿಗೆ ಅರ್ಥವಾಗುವುದಿಲ್ಲ. ಬೇಕಾದರೆ ನಾಳೆ ಅದೇ ರೋಗಿ ಎಸ್ಆರ್ಸಿಸಿ ಆಸ್ಪತ್ರೆಯಲ್ಲಿ ಇರುತ್ತಾರೆ ಮತ್ತು ಯಾರು ಬೇಕಾದರೂ ಹೋಗಿ ಸಹಾಯ ಮಾಡಬಹುದು. ನಿಮ್ಮ ಸಹಾಯದಿಂದ ಅವರು ಖುಷಿಪಡಬಹುದು' ಎಂದು ಉತ್ತರ ಕೊಟ್ಟಿದ್ದಾರೆ.