ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಹಾಗೂ ವೈದ್ಯ ರಮಣ ರಾವ್​ 
ಸ್ಯಾಂಡಲ್‌ವುಡ್

1.5 ಗಂಟೆ ಕಿಕ್​ ಬಾಕ್ಸಿಂಗ್, ಶಾಕಿಂಗ್​ ಇಸಿಜಿ ವರದಿ... ಅಪ್ಪುವಿನ ಕೊನೆಯ ಕ್ಷಣ ನೆನೆದು ಭಾವುಕರಾದ ಡಾ. ರಮಣ ರಾವ್! Puneeth Rajkumar

ತಾಜಾ ಸಂಗತಿ ಏನೆಂದರೆ, ಅಪ್ಪು ನಿಧನಕ್ಕೆ ಐದು ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ, ಅಂದು ಅವರ ಅಂತಿಮ ಕ್ಷಣಗಳಲ್ಲಿ ತುಂಬಾ ಹತ್ತಿರದಿಂದ ಅಪ್ಪು ಅವರನ್ನು ನೋಡಿದ್ದ ವೈದ್ಯ ಡಾ. ರಮಣ ರಾವ್ ಅವರು ಇತ್ತೀಚೆಗೆ ನೀಡಿದ ಹೊಸ ಸಂದರ್ಶನವೊಂದು ಇದೀಗ ವೈರಲ್ ಆಗಿದೆ. ರಮಣ ರಾವ್ ಅವರ ಹೇಳಿಕೆಗಳು ಅಂದು ನಡೆದ ಆಘಾತಕಾರಿ ಘಟನೆಗಳನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.

ಬೆಂಗಳೂರು: ಕನ್ನಡ ಚಿತ್ರರಂಗದ ಕಣ್ಮಣಿ, ಕರ್ನಾಟಕ ರತ್ನ ಹಾಗೂ ಅಪ್ಪು ಎಂದೇ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಕಾಲಿಕವಾಗಿ ನಿಧನರಾಗಿದ್ದನ್ನೂ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೇ ಅಕ್ಟೋಬರ್​ 29ಕ್ಕೆ ಅಪ್ಪು ನಮ್ಮನ್ನೆಲ ಅಗಲಿ 5 ವರ್ಷಗಳು ಕಳೆಯುತ್ತವೆ. ಆ ಕಹಿ ನೆನಪುಗಳು ಹಾಗೂ ಅಂದು ನಡೆದ ಘಟನೆಗಳು ಇಂದಿಗೂ ಕನ್ನಡಿಗರ ಕಣ್ಣಂಚನ್ನು ಒದ್ದೆ ಮಾಡುತ್ತಲೇ ಇವೆ. ಅಪ್ಪು ಇಲ್ಲದ ಚಿತ್ರರಂಗ ಬಡವಾಗಿದೆ ಅನ್ನೋ ಮಾತುಗಳು ಕೂಡ ಆಗಾಗ್ಗೆ ಕೇಳಿಬರುತ್ತಲೇ ಇವೆ.

ತಾಜಾ ಸಂಗತಿ ಏನೆಂದರೆ, ಅಪ್ಪು ನಿಧನಕ್ಕೆ ಐದು ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ, ಅಂದು ಅವರ ಅಂತಿಮ ಕ್ಷಣಗಳಲ್ಲಿ ತುಂಬಾ ಹತ್ತಿರದಿಂದ ಅಪ್ಪು ಅವರನ್ನು ನೋಡಿದ್ದ ವೈದ್ಯ ಡಾ. ರಮಣ ರಾವ್ ಅವರು ಇತ್ತೀಚೆಗೆ ನೀಡಿದ ಹೊಸ ಸಂದರ್ಶನವೊಂದು ಇದೀಗ ವೈರಲ್ ಆಗಿದೆ. ರಮಣ ರಾವ್ ಅವರ ಹೇಳಿಕೆಗಳು ಅಂದು ನಡೆದ ಆಘಾತಕಾರಿ ಘಟನೆಗಳನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.

ರ್ಯಾಪಿಡ್​ ರಶ್ಮಿ ಅವರ 'ಜಸ್ಟ್ ಕ್ಯೂರಿಯಸ್ ಕನ್ನಡ' (Just Curious Kannada Clips) ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ. ರಮಣ ರಾವ್, ಅಪ್ಪು ಜತೆಗಿನ ತಮ್ಮ ಆಳವಾದ ಒಡನಾಟ ಹಾಗೂ ವೃತ್ತಿಜೀವನದಲ್ಲಿ ತಮಗೆ ಎದುರಾದ ಅತ್ಯಂತ ನೋವಿನ ಹಾಗೂ ಕಷ್ಟಕರ ಅನುಭವವನ್ನು ಕಣ್ಣೀರಿಡುತ್ತಾ ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನನಗೆ ಕೇವಲ ರೋಗಿಯಾಗಿರದೆ ನನ್ನ ಸ್ವಂತ ಮಗನಂತೆ ಇದ್ದರು ಎಂದು ರಮಣ ರಾವ್ ಭಾವುಕರಾದರು. ನನ್ನ ಎರಡನೇ ಮಗ ಹಾಗೂ ಅಪ್ಪು ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು, ಒಟ್ಟಿಗೆ ಆಟವಾಡಿ ತಮ್ಮ ಆಟಿಕೆಗಳನ್ನು ಹಂಚಿಕೊಳ್ಳುತ್ತಿದ್ದ ದಿನಗಳನ್ನು ರಮಣ ರಾವ್​ ಇದೇ ಸಮಯದಲ್ಲಿ ಪ್ರೀತಿಯಿಂದ ಸ್ಮರಿಸಿದರು.

ಘಟನೆ ನಡೆದ ಅಕ್ಟೋಬರ್ 29, 2021ರ ಆ ದುರ್ದಿನದ ಬಗ್ಗೆ ಮಾತನಾಡಿದ ಡಾ. ರಮಣ ರಾವ್, ಅಪ್ಪು ಅಂದು ಜಿಮ್‌ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರವಾದ ಕಿಕ್‌ಬಾಕ್ಸಿಂಗ್ (Kick boxing) ವ್ಯಾಯಾಮ ಮಾಡಿದ್ದರು. ಅಂದು ಅವರು ಮೊದಲ ಬಾರಿಗೆ ಈ ಹೊಸ ವ್ಯಾಯಾಮವನ್ನು ಪ್ರಯತ್ನಿಸಿದ್ದರು ಮತ್ತು ಎಂದಿಗಿಂತಲೂ ಹೆಚ್ಚು ಸುಸ್ತಾಗಿದ್ದರು ಎಂದು ರಮಣ ರಾವ್​ ಹೇಳಿದ್ದಾರೆ.

ಅಪ್ಪು ತಮ್ಮ ಕ್ಲಿನಿಕ್‌ಗೆ ಬಂದಾಗ ಅತಿಯಾಗಿ ಬೆವರುತಿರುವುದನ್ನು ಗಮನಿಸಿದ ರಮಣ ರಾವ್​, ಮೇಲ್ನೋಟಕ್ಕೆ ಅದು ಕೇವಲ ಆಯಾಸವಲ್ಲ ಎಂದು ಶಂಕಿಸಿ ಕೂಡಲೇ ಇಸಿಜಿ (ECG) ಪರೀಕ್ಷೆ ಮಾಡಿಸಿದರು. ಆ ಇಸಿಜಿ ವರದಿಯಲ್ಲಿ ಹೃದಯದ ಮೇಲೆ ತೀವ್ರ ಒತ್ತಡ (Strain) ಉಂಟಾಗಿರುವುದು ಸ್ಪಷ್ಟವಾಗಿ ತಿಳಿದುಬಂತು ಎಂದು ರಮಣ ರಾವ್​ ಅವರು ಆತಂಕದ ಕ್ಷಣಗಳನ್ನು ಮೆಲಕು ಹಾಕಿದರು.

ಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ಕೂಡಲೇ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ಆಸ್ಪತ್ರೆಗೆ ತೆರಳುವಂತೆ ವ್ಯವಸ್ಥೆ ಮಾಡಿದರು. ಅಪ್ಪು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಅವರು ಮಾತನಾಡುತ್ತಾ, ಕಾರಿನಲ್ಲಿ ಕುಳಿತುಕೊಳ್ಳಲು ಬಯಸಿದ್ದರು. ಆದರೆ, ಡಾಕ್ಟರ್ ವಿನಂತಿಯ ಮೇರೆಗೆ ತಮ್ಮ ಪತ್ನಿ ಅಶ್ವಿನಿ ಅವರ ಮಡಿಲಿನಲ್ಲಿ ತಲೆಹಾಕಿ ಮಲಗಿದ್ದರು.

ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷವಿರುವಷ್ಟರಲ್ಲಿ ಅಪ್ಪು ಅವರ ಹೃದಯ ಬಡಿತ ನಿಂತುಹೋಗಿತ್ತು ಎಂದು ಡಾ. ರಮಣ ರಾವ್ ಭಾವುಕರಾದರು. ವಿಕ್ರಮ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಯಾವುದೇ ಹೃದಯ ಬಡಿತವಿರಲಿಲ್ಲ. ವೈದ್ಯರ ತಂಡವು ಜೀವ ಉಳಿಸಲು ಹಪಹಪಿಸಿ ಎಲ್ಲಾ ರೀತಿಯ ತುರ್ತು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ರಮಣ ರಾವ್​ ಅವರು ಕಣ್ಣೀರಿಟ್ಟರು.

ಡಾ. ರಾಜಕುಮಾರ್ ಅವರ ಕುಟುಂಬದೊಂದಿಗೆ ದೀರ್ಘಕಾಲಿಕ ಒಡನಾಟ ಹೊಂದಿದ್ದ ಮತ್ತೊಬ್ಬ ವೈದ್ಯ ಡಾ. ರಂಗ ನಾಯಕ್ ಅವರೂ ಕೂಡ ಈ ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಿಕೊಡಲು ನೆರವಾದರು ಎಂದು ಡಾ. ರಮಣ ರಾವ್ ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಕರ್ನಾಟಕ ರಾಜ್ಯಕ್ಕೆ ಮತ್ತು ಕೋಟ್ಯಂತರ ಕನ್ನಡಿಗರಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿ ಕಣ್ಣೀರಿನ ವಿದಾಯ ಹೇಳಿದ ಆ ದುಃಖದ ದಿನಗಳು ಇಂದಿಗೂ ಚಿರಸ್ಮರಣೀಯವಾಗಿವೆ.

ಅಂದಹಾಗೆ, ಪುನೀತ್​ ರಾಜ್​ಕುಮಾರ್​ ಕನ್ನಡ ಚಿತ್ರರಂಗದ ಅಪ್ರತಿಮ ನಟ, 'ಪವರ್ ಸ್ಟಾರ್' ಎಂದೇ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಪುನೀತ್ ರಾಜ್‌ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ರಾಜಕುಮಾರ. ವರನಟ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಕೊನೆಯ ಮಗನಾಗಿ 1975 ಮಾರ್ಚ್ 17 ರಂದು ಜನಿಸಿದ ಪುನೀತ್, ಬಾಲ್ಯದಲ್ಲೇ ಬೆಟ್ಟದ ಹೂವು, ಭಾಗ್ಯವಂತ, ಎರಡು ನಕ್ಷತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅದ್ಭುತ ಅಭಿನಯ ನೀಡಿದರು. ಬೆಟ್ಟದ ಹೂವು ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.

ಬಳಿಕ 'ಅಪ್ಪು' ಚಿತ್ರದ ಮೂಲಕ ನಾಯಕನಾಗಿ ಪೂರ್ಣ ಪ್ರಮಾಣದ ಎಂಟ್ರಿ ಕೊಟ್ಟ ಅವರು, ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕರುನಾಡಿನ ಮನೆಮನೆಯ ಅಚ್ಚುಮೆಚ್ಚಿನ 'ಅಪ್ಪು' ಆದರು. ಕೇವಲ ನಟನೆಯಷ್ಟೇ ಅಲ್ಲದೆ, ಅತ್ಯುತ್ತಮ ಗಾಯಕರಾಗಿ ಜನಪ್ರಿಯ ಹಾಡುಗಳನ್ನು ಹಾಡಿದ್ದಲ್ಲದೆ, ಕನ್ನಡದ ಕೋಟ್ಯಧಿಪತಿಯಂತಹ ರಿಯಾಲಿಟಿ ಶೋನ ನಿರೂಪಕರಾಗಿ ಮನೆಮಾತಾಗಿದ್ದರು. ತೆರೆಮೇಲೆ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ ಅವರು, ತೆರೆಮರೆಯಲ್ಲಿ ತಂದೆಯ ಮಾರ್ಗದರ್ಶನದಂತೆ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಗೋಶಾಲೆಗಳು ಹಾಗೂ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಪ್ರಸಿದ್ಧ ಲೋಕೋಪಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಚಲ ವಿನಯತೆ, ಸರಳತೆ ಮತ್ತು ಮಾನವೀಯ ಗುಣಗಳೇ ಅವರನ್ನು ಇಡೀ ಕನ್ನಡಿಗರ ಆರಾಧ್ಯ ದೈವವನ್ನಾಗಿಸಿದ್ದು, 2021ರ ಅಕ್ಟೋಬರ್ 29ರಂದು ಅವರು ನಮ್ಮನ್ನು ಅಗಲಿದ್ದರೂ, ಅವರ ಆದರ್ಶಗಳು ಮತ್ತು ನೆನಪುಗಳು ಎಂದೆಂದಿಗೂ ಅಮರವಾಗಿವೆ.