ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಮಿಂಚಿದವರು ಸಮೀರಾ ರೆಡ್ಡಿ. ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ ಅವರು, ಕ್ರಮೇಣ ಬಾಲಿವುಡ್ನತ್ತ ಮುಖ ಮಾಡಿದರು. ಒಂದಿಷ್ಟು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದರಾದರೂ, ಅಷ್ಟೇನೂ ಮಿಂಚಲಿಲ್ಲ.
ಇಷ್ಟಕ್ಕೂ ಸಮೀರಾಗೆ ಯಾಕೆ ಬಾಲಿವುಡ್ನಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಈ ಕುರಿತು ಅವರೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಾನು ಕಪ್ಪು, ಉದ್ದ ಎಂಬ ಕಾರಣಕ್ಕೆ ಬಾಲಿವುಡ್ನಲ್ಲಿ ಅವಕಾಶಗಳು ಸಿಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
'ಎಷ್ಟೋ ಜನ ನಾನು ಬಹಳ ಕಪ್ಪು, ಉದ್ದ ಮತ್ತು ದಪ್ಪ ಎಂದು ಹೇಳುತ್ತಿದ್ದರು. ಪಕ್ಕದ್ಮನೆ ಹುಡುಗಿ ಪಾತ್ರಕ್ಕೆ ನಾನು ಹೊಂದುವುದಿಲ್ಲ ಎಂದು ಹೇಳುತ್ತಿದ್ದರು. ಹಾಗೆ ಪಕ್ಕದ್ಮನೆ ಹುಡುಗಿ ಪಾತ್ರಗಳಿಗೆ ನಾನು ಸೂಟ್ ಆಗದ ಕಾರಣಕ್ಕೆ, ಬಹುಶಃ ನಾನು ಹಿಂದಿ ಚಿತ್ರಗಳಲ್ಲಿ ಹೆಚ್ಚು ಕಾಲ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ ಸಮೀರಾ.
ಹಾಗಂತ ಅವರಿಗೆ ಬೇಸರವಿಲ್ಲವಂತೆ. 'ನಿಜ ಹೇಳಬೇಕೆಂದರೆ, ಈ ಕುರಿತು ನನಗೆ ಯಾವುದೇ ಬೇಸರವಿಲ್ಲ. ಏಕೆಂದರೆ, ನಾನು ಹೇಗಿದ್ದೀನೋ ಅದರ ಬಗ್ಗೆ ಸಂತೋಷವಿದೆ. ಪಾತ್ರಕ್ಕೆ ಫಿಟ್ ಆಗಬೇಕು ಎಂಬ ಕಾರಣಕ್ಕೆ ನನ್ನನ್ನು ನಾನು ಬದಲಾಯಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮೇಕಪ್ಮ್ಯಾನ್ಗೆ ಭಾವುಕ ವಿದಾಯ ಹೇಳಿದ ರಮೇಶ್ ಅರವಿಂದ್
ಅಂದಹಾಗೆ, ಸಮೀರಾ ರೆಡ್ಡಿ ಕನ್ನಡದಲ್ಲೂ ಅಭಿನಯಿಸಿದ್ದರು. ಸುದೀಪ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ 'ವರದನಾಯಕ' ಚಿತ್ರದಲ್ಲಿ ಸುದೀಪ್ಗೆ ಜೋಡಿಯಾಗಿ ನಟಿಸಿದ್ದರು. ಅದೇ ಅವರ ಕೊನೆಯ ಚಿತ್ರವಾಯಿತು. ಆ ನಂತರ ಅವರು ಕಾರಣಾಂತರಗಳಿಂದ ಮತ್ತೆ ಚಿತ್ರಗಳಲ್ಲಿ ಅಭಿನಯಿಸಲಿಲ್ಲ.