ಬೆಂಗಳೂರು: ಅಚ್ಯುತ್ ಕುಮಾರ್ ಇತ್ತೀಚೆಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕೆಜಿಎಫ್ 2', 'ಫೋರ್ ವಾಲ್ಸ್', 'ಮಾನ್ಸೂನ್ ರಾಗ', 'ಕಾಂತಾರ' ಮುಂತಾದ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆದಿರುವ ಅಚ್ಯುತ್, ಈಗ ಇನ್ನೊಂದು ಹೊಸ ಚಿತ್ರದ ಮೂಲಕ ಬರುವುದಕ್ಕೆ ತಯಾರಿ ನಡೆಸಿದ್ದಾರೆ. ಅದೇ 'ಸದ್ದು ವಿಚಾರಣೆ ನಡೆಯುತ್ತಿದೆ'. ಈ ಚಿತ್ರವು ನ. 25ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಟ್ರೇಲರ್ ಹೊರಬಂದಿದೆ.
ಅಚ್ಯುತ್ ಕುಮಾರ್ಗೆ ಭಾಸ್ಕರ್ ನಟನೆ ಮಾಡುತ್ತಾರೆ ಎಂಬ ವಿಷಯ ಗೊತ್ತಿಂತೆ. ಆದರೆ, ನಿರ್ದೇಶನ ಮಾಡುವ ವಿಷಯ ಗೊತ್ತಿರಲಿಲ್ಲವಂತೆ. 'ಈ ಚಿತ್ರದಲ್ಲಿ ಇನ್ಸ್ಪೆಕ್ಟರ್ ಪಾತ್ರ ಮಾಡಿ ಎಂದು ಅವರು ಹೇಳಿದಾಗ, ಇಲ್ಲಿ ಕೋಳಿ ಕಳ್ಳರ ಪಾತ್ರ ಕೊಡಿ ಎಂದು ಕೇಳಿದೆ. ಕಾರಣ ಆ ಪಾತ್ರ ಬಹಳ ಇಂಟರೆಸ್ಟಿಂಗ್ ಆಗಿತ್ತು. ಆದರೆ, ಇನ್ಸ್ಪೆಕ್ಟರ್ ಪಾತ್ರ ನೀವೇ ಮಾಡಬೇಕು ಎಂದು ಹೇಳಿದ್ದರಿಂದ, ಅದನ್ನು ನಿರ್ವಹಿಸಿದ್ದೆನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ' ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಅಚ್ಯುತ್ ಕುಮಾರ್.
ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರ ನಿರ್ಮಿಸಿರುವ ಈ ಚಿತ್ರಕ್ಕೆ ರಾಜ್ ಕಾಂತ ಛಾಯಾಗ್ರಹಣ, ಸಚಿನ್ ಬಸ್ರೂರು ಅವರ ಸಂಗೀತವಿದೆ.