ಆಲಿಯಾ ಭಟ್ ಮತ್ತು ಸಂಜಯ್ ದತ್ ಅಭಿನಯದ 'ಸಡಕ್ 2' ಕಳೆದ ವಾರ ಹೊಸ ದಾಖಲೆಯನ್ನೇ ಮಾಡಿತ್ತು. ಯೂಟ್ಯೂಬ್ನಲ್ಲಿ ಅತೀ ಹೆಚ್ಚು ಡಿಸ್ಲೈಕ್ಗಳನ್ನು ಪಡೆದ ಭಾರತೀಯ ಚಿತ್ರವೊಂದರ ಟ್ರೇಲರ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈಗ 'ಸಡಕ್ 2' ಇನ್ನೊಂದು ಹೊಸ ದಾಖಲೆ ಮಾಡಿದೆ.
ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಡಿಸ್ಲೈಕ್ಗಳನ್ನು ಪಡೆದ ಖ್ಯಾತಿ 'ಸಡಕ್ 2' ಚಿತ್ರದ್ದಾಗಿದೆ. ಇದಕ್ಕೂ ಮುನ್ನ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಅವರ 'ಬೇಬಿ' ವಿಡಿಯೋಗೆ 11.63 ಮಿಲಿಯನ್ ಡಿಸ್ಲೈಕ್ಗಳು ಸಿಕ್ಕಿದ್ದವು.
ಇದೀಗ 'ಸಡಕ್ 2' ಚಿತ್ರದ ಟ್ರೇಲರ್ಗೆ 11.65 ಮಿಲಿಯನ್ ಡಿಸ್ಲೈಕ್ಗಳು ಸಿಗುವ ಮೂಲಕ, ಅದು ಜಸ್ಟಿನ್ ಬೈಬರ್ನ ಹಿಂದಕ್ಕೆ ಹಾಕುವುದರ ಜತೆಗೆ, ಜಗತ್ತಿನಲ್ಲೇ ಎರಡನೇ ಅತೀ ಹೆಚ್ಚು ಡಿಸ್ಲೈಕ್ಗಳಿಗೆ ಪಾತ್ರವಾದ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಸಡಕ್ 2' ಮತ್ತು ಜಸ್ಟಿನ್ ಬೈಬರ್, ಎರಡು ಮತ್ತು ಮೂರನೆಯ ಸ್ಥಾನವನ್ನು ಆಕ್ರಮಿಸಿಕೊಂಡರೆ, ಮೊದಲ ಸ್ಥಾನ ಯಾರ ಹೆಸರಿನಲ್ಲಿದೆ ಎಂಬ ಪ್ರಶ್ನೆ ಬರುವುದು ಸಹಜ. ಈ ದಾಖಲೆ ಯೂಟ್ಯೂಬ್ನ ಹೆಸರಿನಲ್ಲೇ ಇರುವುದು ವಿಶೇಷ.
2018ರಲ್ಲಿ ಯೂಟ್ಯೂಬ್ ಸಂಸ್ಥೆಯು 'ಯೂಟ್ಯೂಬ್ ರಿವೈಂಡ್ 2018: ಎವರಿಒನ್ ಕಂಟ್ರೋಲ್ಸ್ ರಿವೈಂಡ್' ಎಂಬ ವಿಡಿಯೋ ಬಿಡುಗಡೆ ಮಾಡಿತ್ತು. ಈ ವಿಡಿಯೋಗೆ ಅತೀ ಹೆಚ್ಚು ಡಿಸ್ಲೈಕ್ಗಳು ಸಿಗುವ ಮೂಲಕ ಇನ್ನೂ ನಂಬರ್ ಒನ್ ಸ್ಥಾನದಲ್ಲಿದೆ. ಆ ನಂತರ 'ಸಡಕ್ 2' ಮತ್ತು ಜಸ್ಟಿನ್ ಬೈಬರ್ ಬರುತ್ತಾರೆ ಎಂದು ಹೇಳಲಾಗುತ್ತದೆ.