ಸಿನಿವಾಣಿ

ದುಡ್ಡು, ಸಂಬಂಧಗಳ ನಡುವಿನ ತಿಕ್ಕಾಟವೇ 'ರೂಪಾಯಿ'; ಫೆ. 10ಕ್ಕೆ ಬಿಡುಗಡೆ

chetannadiger

ಬೆಂಗಳೂರು: ಒಂದು ದೊಡ್ಡ ಹಗರಣಕ್ಕೆ ಸಂಬಂಧಿಸಿದ ಹಣ, ಮಧ್ಯಮ ವರ್ಗದ ಜನರಿಗೆ ಸಿಗುತ್ತದೆ. ಆ ನಂತರ ಅವರ ಜೀವನದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತವೆ. ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ಹೇಳಹೊರಟಿರುವ ಚಿತ್ರವೇ 'ರೂಪಾಯಿ'.

ವಿಜಯ್​ ಜಗದಾಲ್​ ಮೊದಲ ಬಾರಿಗೆ ನಟಿಸಿ-ನಿರ್ದೇಶಿಸಿರುವ 'ರೂಪಾಯಿ' ಚಿತ್ರವು ಫೆ.10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವಾರವಷ್ಟೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಈಗ 'ಉಸಿರಾಟ' ಎಂಬ ಇನ್ನೊಂದು ಹೊಸ ಹಾಡು ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ವ್ಯಾಸರಾಜ ಸೋಸಲೆ ಹಾಡಿದ್ದು, ಆನಂದ್​ ರಾಜಾವಿಕ್ರಮ್​ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ವಿಜಯ್​ ಜಗದಾಲ್​, 'ದುಡ್ಡಿಗಿಂತ ಸಂಬಂಧಗಳ ಕುರಿತಾದ ಚಿತ್ರ ಇದು. ದುಡ್ಡು ಸಂಬಂಧಗಳನ್ನು ಹೇಗೆ ಹಾಳು ಮಾಡುತ್ತದೆ ಎಂದು ಹೇಳುವ ಚಿತ್ರ ಇದು. ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ಉಕ್ಕಿಸುವಂತಿದೆ' ಎನ್ನುತ್ತಾರೆ ವಿಜಯ್​ ಜಗದಾಲ್​. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ.

ವಿವಿಧ್​ ಸಿನಿಮಾಸ್​ ಬ್ಯಾನರ್​ನಡಿ ಮಂಜುನಾಥ್​ ಎಂ, ಹರೀಶ್​ ಬಿ.ಕೆ ಮತ್ತು ವಿನೋದ ಎನ್​ ಜಂಟಿಯಾನಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಜಗದಾಲ್​ ಜೊತೆಗೆ ಕೃಷಿ ತಾಪಂಡ, ಯಶ್ವಿಕ್​, 'ಮೈತ್ರಿ' ಜಗದೀಶ್​, ಶಂಕರ್​ ಮೂರ್ತಿ, ರಾಮ್​ ಚಂದನ್​, ಚಂದನಾ ರಾಘವೇಂದ್ರ, ಪ್ರಮೋದ್​ ಶೆಟ್ಟಿ, ರಾಕ್​ಲೈನ್​ ಸುಧಾಕರ್​, ಮೋಹನ್​ ಜನೇಜ ಮುಂತಾದವರು ನಟಿಸಿದ್ದಾರೆ.

'ರೂಪಾಯಿ' ಚಿತ್ರಕ್ಕೆ ಆನಂದ್ ರಾಜವಿಕ್ರಮ್​ ಅವರ ಸಂಗೀತ, ಆರ್​.ಡಿ. ನಾಗಾರ್ಜುನ್​ ಅವರ ಛಾಯಾಗ್ರಹಣ ಮತ್ತು ಶಿವರಾಜ್​ ಮೇಹು ಅವರ ಸಂಕಲನವಿದೆ.