ಬೆಂಗಳೂರು: ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್ಆರ್ಆರ್ ಬಿಡುಗಡೆಗೆ ಈ ಹಿಂದೆ ಒಮ್ಮೆ ಘೋಷಿಸಿದ್ದ ದಿನಾಂಕ ಬದಲಾಗಿದ್ದು, ಆಮೇಲೆ ಹೊಸದಾಗಿ ಎರಡು ದಿನಾಂಕಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಅದೂ ಅಲ್ಲ, ಇದೂ ಅಲ್ಲ ಎಂದು ಆ ಎರಡೂ ದಿನಾಂಕಗಳನ್ನು ಬಿಟ್ಟು ಆರ್ಆರ್ಆರ್ ಬಿಡುಗಡೆಗೆ ಮತ್ತೊಂದು ಹೊಸ ದಿನಾಂಕ ನಿಗದಿ ಮಾಡಿ ಘೋಷಿಸಲಾಗಿದೆ. ಅಷ್ಟಕ್ಕೂ ಈ ಬದಲಾವಣೆಗೆ ಕಾರಣ, ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್'.
ಆರ್ಆರ್ಆರ್ ಚಿತ್ರವನ್ನು ಮಾರ್ಚ್ 18 ಅಥವಾ ಏಪ್ರಿಲ್ 28ರಂದು ಬಿಡುಗಡೆ ಮಾಡುವುದು ಎಂದು ಚಿತ್ರತಂಡ ಈಗಾಗಲೇ ಘೋಷಣೆ ಮಾಡಿತ್ತು. ಆದರೆ ಎರಡು ಪ್ರಮುಖ ದಿನಗಳನ್ನು ಲಾಕ್ ಮಾಡಿದ್ದ ರಾಜಮೌಳಿ ಈಗ ಆ ಎರಡು ದಿನಗಳನ್ನು ಬಿಟ್ಟು ಹೊಸ ದಿನಾಂಕವನ್ನು ಘೋಷಿಸಿದ್ದಾರೆ. ಮಾರ್ಚ್ 25ರಂದು ಆರ್ಆರ್ಆರ್ ಚಿತ್ರ ಬಿಡುಗಡೆ ಆಗಲಿದೆ.
ಏಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ 'ಜೇಮ್ಸ್' ಚಿತ್ರವನ್ನು ಅಪ್ಪು ಜನ್ಮದಿನವಾದ ಮಾರ್ಚ್ 17ರಂದು ಬಿಡುಗಡೆ ಮಾಡಲು ಆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಅಪ್ಪುಗಾಗಿ ರಾಜಮೌಳಿ ತಮ್ಮ ದಾರಿ ಬದಲಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಜ್ಯೂನಿಯರ್ ಎನ್‌ಟಿಆರ್, ರಾಮ್ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದೊಡ್ಡ ತಾರಾಬಳಗವೇ ಇರುವ ಆರ್ಆರ್ಆರ್ ಸಿನಿಮಾ ಈಗಾಗಲೇ ಭಾರಿ ಕುತೂಹಲ ಕೆರಳಿಸಿದೆ. ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಡಿವಿವಿ ದಾನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ ಆರ್ಆರ್ಆರ್ ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡಲಿದೆ.