ಸಿನಿವಾಣಿ

ರಾವಣನಾಗಲು ಯಶ್​ಗೆ 150 ಕೋಟಿ ರೂ.!? ಬಾಲಿವುಡ್​ ಅಂಗಳದಲ್ಲಿ ಹೊಸ ಸುದ್ದಿ!

‘ಕೆಜಿಎಫ್​ ಚಾಪ್ಟರ್ 2’ ಭರ್ಜರಿ ಯಶಸ್ಸಿನ ಬಳಿಕ ನಟ ಯಶ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ? ಅವರ ಹೊಸ ಸಿನಿಮಾ ಯಾವಾಗ ಘೋಷಣೆಯಾಗಲಿದೆ? ಎಂಬ ಪ್ರಶ್ನೆ, ‘ಕೆಜಿಎಫ್​ ಚಾಪ್ಟರ್ 2’ ಬಿಡುಗಡೆಯಾಗಿ 555 ದಿನಗಳೇ ಕಳೆದರೂ, ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಕಳೆದ ಜನವರಿಯಲ್ಲಿ ಅವರ ಹುಟ್ಟುಹಬ್ಬದಂದು ಅನೌನ್ಸ್ ಆಗಬಹುದು ಎನ್ನಲಾಗಿತ್ತಾದರೂ, ಯಶ್ ಅಭಿಮಾನಿಗಳಿಗೆ ಓಪನ್ ಲೆಟರ್ ಮೂಲಕ, ಇನ್ನೂ ಕೆಲ ದಿನ ಕಾಯುವಂತೆ ಮನವಿ ಮಾಡಿಕೊಂಡಿದ್ದರು. ಕಳೆದ ಜುಲೈನಲ್ಲೂ ಯಶ್, ಹೊಸ ಸಿನಿಮಾ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದರು.

ಅದರ ನಡುವೆ, ‘ಯಶ್ 19’ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರಲಿದೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಹರಿದಾಡುತ್ತಿದೆ. ಅದರ ಜತೆಗೆ ‘ದಂಗಲ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಸಿನಿಮಾ ನಿರ್ದೇಶಿಸಲಿದ್ದು, ಅದರಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮತ್ತೊಂದು ಸುದ್ದಿ ಸಹ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಈ ಎರಡೂ ಚಿತ್ರಗಳ ಬಗ್ಗೆ ಯಶ್ ಆಗಲೀ ಅಥವಾ ಚಿತ್ರತಂಡದವರಾಗಲೀ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮತ್ತೊಂದೆಡೆ ನಿತೀಶ್ ತಿವಾರಿ ‘ರಾಮಾಯಣ’ದಲ್ಲಿ ರಾವಣನಾಗಲು ಯಶ್ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂಬ ಹೊಸ ಸುದ್ದಿಯೊಂದು ಬಿಟೌನ್‌ನಲ್ಲಿ ಗರಿಬಿಚ್ಚಿದೆ.

ಮೂಲಗಳ ಪ್ರಕಾರ ‘ಯಶ್ ಸಂಭಾವನೆ 100 ಕೋಟಿ ರೂ. ಆಗಿದ್ದು, ಹಾಗೇನಾದರೂ ಚಿತ್ರೀಕರಣಕ್ಕೆ, ಪ್ರಚಾರಕ್ಕೆ ಈಗ ನೀಡಿರುವ ಡೇಟ್ಸ್‌ಗಿಂತ ಹೆಚ್ಚಿನ ಸಮಯ ಬೇಕಾದಲ್ಲಿ ಸಂಭಾವನೆ ಮೊತ್ತವನ್ನು ಹೆಚ್ಚಿಸುವ ಅವಕಾಶವಿದೆ. ಹೀಗಾಗಿ ಯಶ್ ‘ರಾಮಾಯಣ’ ಚಿತ್ರಕ್ಕೆ 100ರಿಂದ 150 ಕೋಟಿ ರೂ.ವರೆಗೂ ಸಂಭಾವನೆ ಪಡೆಯಲಿದ್ದಾರೆ’ ಎನ್ನಲಾಗಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಲಿದ್ದಾರೆ ಎನ್ನಲಾಗಿದ್ದು, 2024ರ ಫೆಬ್ರವರಿಯಲ್ಲಿ ಈ ಚಿತ್ರ ಸೆಟ್ಟೇರಲಿದೆಯಂತೆ.