ಸಿನಿವಾಣಿ

ಬಾಲಿವುಡ್​ ಚಿತ್ರ ನಿರ್ದೇಶನಕ್ಕೆ ನೋ ಎಂದ ರಿಷಭ್; ಕನ್ನಡದಲ್ಲಿ ನಿರ್ದೇಶನ ಮಾಡುವುದಾಗಿ ಹೇಳಿಕೆ …

ಮುಂಬೈ: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರವು ಬಿಡುಗಡೆಯಾಗಿ ಒಂದು ತಿಂಗಳುಗಳಾಗಿವೆ. ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ರಿಷಭ್​, ಮುಂದೆ ಏನು ಮಾಡುತ್ತಾರೆ? ಯಾವ ಬಾಷೆಗೆ ಹಾರುತ್ತಾರೆ ಎಂಬ ಕುತೂಹಲ ಜನರಲ್ಲಿದೆ. ಆದರೆ, ರಿಷಭ್​ ಮಾತ್ರ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಚಿತ್ರಗಳನ್ನೂ ನಿರ್ದೇಶಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ, ಇಂಗ್ಲೀಷ್​ ವೆಬ್​ಸೈಟ್​ವೊಂದಕ್ಕೆ ಸಂದರ್ಶನ ನೀಡಿರುವ ಅವರು ತಮಗೆ ಬಾಲಿವುಡ್​ ಚಿತ್ರಗಳನ್ನು ನಿರ್ದೇಶಿಸುವ ಆಸಕ್ತಿ ಇಲ್ಲ ಎಂದಿದ್ದಾರೆ. ''ಕಾಂತಾರ' ಬಿಡುಡೆಯ ನಂತರ ನನಗೆ ಬಾಲಿವುಡ್​ನ ಕೆಲವು ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಗಳಿಂದ ಕರೆ ಬಂದಿದೆ. ಒಟ್ಟಿಗೆ ಚಿತ್ರ ಮಾಡೋಣ ಎಂದು ಹಲವು ಸಂಸ್ಥೆಗಳು ನನಗೆ ಆಫರ್​ ನೀಡಿವೆ. ಆದರೆ, ನನಗೆ ಕನ್ನಡದಲ್ಲೇ ಚಿತ್ರ ನಿರ್ದೇಶನ ಮಾಡುವುದಕ್ಕೆ ಇಷ್ಟ. ಬೇರೆ ಯಾವ ಭಾಷೆಗಳಲ್ಲೂ ನನಗೆ ಚಿತ್ರ ನಿರ್ದೇಶನ ಮಾಡುವ ಆಸಕ್ತಿ ಇಲ್ಲ' ಎಂದು ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಅವರು, 'ಕಾಂತಾರ' ಚಿತ್ರದಲ್ಲಿನ ತಮ್ಮ ಪಾತ್ರವನ್ನು ಯಾವ ಬಾಲಿವುಡ್​ ನಟನಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ಮತ್ತು ಆ ಪಾತ್ರದಲ್ಲಿ ಯಾವ ನಟರನ್ನೂ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ ಎಂದು ಹೇಳಿದ್ದರು. 'ದೈವ ಕೋಲಕ್ಕೂ ನನಗೂ ಎಮೋಷನಲ್​ ಆದ ಸಂಬಂಧವಿದೆ. ನಾನು ಅದನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಹಾಗಾಗಿ, ನನಗೆ ಆ ಪಾತ್ರ ಮಾಡುವುದಕ್ಕೆ ಅಷ್ಟು ಕಷ್ಟವಾಗಲಿಲ್ಲ. ಆದರೆ, ಅದನ್ನು ಬೇರೆಯವರಿಗೆ ಅರ್ಥ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಸಾಕಷ್ಟು ಅದ್ಭುತ ನಟರಿದ್ದಾರೆ. ಆದರೆ, ಶಿವ ಪಾತ್ರವನ್ನು ಅವರಿಗೆ ಅರ್ಥ ಮಾಡಿಸುವುದು ನನಗೆ ಬಹಳ ಕಷ್ಟ. ಹಾಗಾಗಿ, ಈ ಪಾತ್ರಕ್ಕೆ ಬೇರೆ ಯಾರನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ಅವರು ಹೇಳಿದ್ದರು.

'ಕಾಂತಾರ' ಚಿತ್ರವು ತೆಲುಗಿಗೆ ಡಬ್​ ಆಗಿ ಹಿಟ್​ ಆದ ಸಂದರ್ಭದಲ್ಲಿ, ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್​ ಅವರು ತಮ್ಮ ಸಂಸ್ಥೆಗೊಂದು ಚಿತ್ರ ನಿರ್ಮಿಸುವುದಕ್ಕೆ ಕೇಳಿಕೊಂಡಿದ್ದರಂತೆ. ಆಗಲೂ ರಿಷಭ್​ ಶೆಟ್ಟಿ ಈ ಆಫರ್​ನ್ನು ನಯವಾಗಿಯೇ ತಿರಸ್ಕರಿಸಿದ್ದರು.

ಅಲ್ಲಿಗೆ ರಿಷಭ್​ ತಮ್ಮ ಮುಂದಿನ ಚಿತ್ರವನ್ನು ಕನ್ನಡದಲ್ಲೇ ಮಾಡಲಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿದೆ. ಆದರೆ, ಆ ಚಿತ್ರ ಯಾವುದು? ಆ ಚಿತ್ರದಲ್ಲಿ ಅವರು ಬರೀ ನಟರಾಗಿರುತ್ತಾರಾ? ಅಥವಾ ನಟನೆ ಜತೆಗೆ ನಿರ್ದೇಶನವನ್ನೂ ಮಾಡುತ್ತಾರಾ? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.