ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಮಂದಿ ಶಾಮೀಲಾಗಿರುವ ಕುರಿತು ಕೆಲವು ಸುದ್ದಿ ವಾಹಿನಿಗಳ ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಬಾಲಿವುಡ್ನ ನಾಲ್ಕು ಸಂಘಟನೆಗಳು ಮತ್ತು 34 ನಿರ್ಮಾಣ ಸಂಸ್ಥೆಗಳು ದೆಹಲಿ ಹೈಕೋರ್ಟ್ಗೆ ಪ್ರಕರಣ ದಾಖಲಿಸಿರುವ ಕುರಿತು ನಿರ್ದೇಶಕ ಮತ್ತು ನಿರ್ಮಾಪಕ ರಾಮ್ಗೋಪಾಲ್ ವರ್ಮಾ ಅವರು ಇದೊಂಥರಾ ಮೇಡಂಗೆ ಮಕ್ಕಳು ದೂರು ಕೊಟ್ಟಂಗಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ಮತ್ತು ಡ್ರಗ್ಸ್ ನಂಟಿನ ಕುರಿತಾಗಿ ಕೆಲವು ಸುದ್ದಿವಾಹಿನಿಗಳು ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ, ಡ್ರಗ್ಗೀಸ್ ಎಂದು ಕರೆಯುತ್ತಿವೆ ಎಂದು ಬಾಲಿವುಡ್ನ ಹಲವು ಜನಪ್ರಿಯ ನಾಯಕರು ಮತ್ತು ಸಂಘಟನೆಗಳು ವಾಹಿನಿಗಳ ಮೇಲೆ ದೆಹಲಿ ಹೈಕೋರ್ಟ್ನಲ್ಲಿ ಸೋಮವಾರ ಪ್ರಕರಣ ದಾಖಲಿಸಿತ್ತು. ಈ ಕುರಿತು, ವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಾಲಿವುಡ್ ಕುರಿತು ಸುದ್ದಿವಾಹಿನಗಳ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ ಬಹಳ ತಡವಾಗಿದ್ದಷ್ಟೇ ಅಲ್ಲ, ಬಹಳ ಕೂಲ್ ಆಗಿದೆ. ಎಲ್ಲಾ ದೊಡ್ಡವರು ಸೇರಿ ದೆಹಲಿ ಹೈಕೋರ್ಟ್ಗೆ ದೂರು ನೀಡಿರುವುದನ್ನು ನೋಡಿದರೆ, ಶಾಲಾ ಮಕ್ಕಳು ತಮ್ಮ ಟೀಚರ್ಗೆ ದೂರು ಕೊಟ್ಟಂತಿದೆ. ಟೀಚರ್ ಟೀಚರ್, ಆ ಆರ್ನಬ್ ನಮ್ಮನ್ನ ಬೈತಿದ್ದಾರೆ ಎಂದು ಹೇಳುತ್ತಿರುವಂತಿದೆ' ಎಂದು ಲೇವಡಿ ಮಾಡಿದ್ದಾರೆ.
ವರ್ಮಾ ಅಲ್ಲದೆ, ಬಾಲಿವುಡ್ ಮಂದಿಯ ಈ ನಡೆಯನ್ನು ಹಲವು ಸೆಲೆಬ್ರಿಟಿಗಳು ಶ್ಲಾಘಿಸಿದ್ದಾರೆ. ಸ್ವರಾ ಭಾಸ್ಕರ್, ರಣ್ವೀರ್ ಶೌರಿ, ಪ್ರಕಾಶ್ ರೈ ಮುಂತಾದವರು ಮೆಚ್ಚಿಕೊಂಡಿದ್ದಾರೆ.