ಸಿನಿವಾಣಿ

ತಂಡ ಸಮೇತ ಬೆಂಗಳೂರಿಗೆ ಬರಲಿದ್ದಾರೆ ರಾಜಮೌಳಿ, ಜೂ.ಎನ್​ಟಿಆರ್​; ಕಾರಣ 'ಆರ್​​​ಆರ್​​​ಆರ್'...

ಬೆಂಗಳೂರು: ನಿರ್ದೇಶಕ ರಾಜಮೌಳಿ ಸಿನಿಮಾ 'ಆರ್​​​ಆರ್​​​ಆರ್'ಗೆಂದು ಇಡೀ ಭಾರತದ ಸಿನಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಬರೋಬ್ಬರಿ 350-400 ಕೋಟಿ ರೂ. ಬಂಡವಾಳ ಹೊಂದಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದಲ್ಲಿನ 3 ಹಾಡುಗಳು, 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನು ಸಿನಿಮಾ 2022 ಜನವರಿ 7ಕ್ಕೆ ರಿಲೀಸ್ ಆಗಲು ರೆಡಿಯಾಗಿದೆ. ಹಾಗಾಗಿ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ಆರ್​​​ಆರ್​​​ಆರ್ ಚಿತ್ರತಂಡ ಬೆಂಗಳೂರಿಗೆ ಕಾಲಿಡಲು ಸಜ್ಜಾಗಿದೆ.

ನವೆಂಬರ್ 26 ರಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ತಮ್ಮ 'ಆರ್​​​ಆರ್​​​ಆರ್' ಸಿನಿಮಾ ಪ್ರಚಾರ ಮಾಡಲಿದ್ದಾರೆ. ರಾಜಮೌಳಿ ಸಿನಿ ಕರಿಯರ್ ಬದಲಾಯಿಸಿದ ಸಿನಿಮಾ ಅಂದರೆ ಅದು 'ಬಾಹುಬಲಿ'. ಆ ಸಿನಿಮಾದಿಂದ ಅವರು ಇಡೀ ಜಗತ್ತಿನ ಗಮನ ಸೆಳೆದರು. ಆದರೆ, 'ಬಾಹುಬಲಿ' ಸಿನಿಮಾ ಬರೀ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈಗ 'ಆರ್​​​ಆರ್​​​ಆರ್' ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ನಿರ್ದೇಶಕನ ಸಿನಿಮಾ ತಮ್ಮ ಭಾಷೆಯಲ್ಲೇ ನೋಡಬಹುದು.

ಇದೇ ಕಾರಣಕ್ಕೆ 'ಆರ್​​​ಆರ್​​​ಆರ್' ತಂಡ ಪ್ರೇಕ್ಷಕರಿಗೆ ಚಿತ್ರವನ್ನು ಕನ್ನಡದಲ್ಲಿಯೇ ನೋಡಿ ಆನಂದಿಸಿ ಎಂದು ವಿನಂತಿಸಲು ಬೆಂಗಳೂರಿಗೆ ಬರುತ್ತಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಇಡೀ ಆರ್​​ಆರ್​​ಆರ್ ಸಿನಿಮಾ ತಂಡ ಭಾಗಿಯಾಗಲಿದೆ ಎನ್ನುವುದು ಸದ್ಯದ ಮಾಹಿತಿ. ಜೊತೆಗೆ, ಸಿನಿಮಾ ತಂಡ ದೇಶದ ಬೇರೆ ಬೇರೆ ಪ್ರಮುಖ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ.

ಸಿನಿಮಾದ ಟ್ರೈಲರ್ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇಲ್ಲಿಯವರೆಗೆ ಸಿನಿಮಾ ಪೋಸ್ಟರ್​​​ಗಳನ್ನು, ಹಾಡುಗಳನ್ನು, ವಿಶೇಷ ವಿಡಿಯೋಗಳನ್ನು ಆಧರಿಸಿದ ಕನ್ನಡಿಗರು ಮುಂದೆ ಚಿತ್ರದ ಟ್ರೈಲರ್, ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳಲಿದ್ದಾರೆ ಎನ್ನುವ ಭರವಸೆ ಚಿತ್ರತಂಡಕ್ಕೆ ಇದೆ.